ಸರ್ಕಾರಿ ಸಭೆಗಳಲ್ಲಿ ಪೌಷ್ಟಿಕ ಆಹಾರಕ್ಕೆ ಆದ್ಯತೆ; ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ

0
7

ಬೆಂಗಳೂರು, ಏ.14: ಸರ್ಕಾರಿ ಸಭೆ ಹಾಗೂ ಸಮಾರಂಭಗಳಲ್ಲಿ ಪೌಷ್ಟಿಕ ಮತ್ತು ಆರೋಗ್ಯಕರ ಆಹಾರವನ್ನು ಉತ್ತೇಜಿಸಲು ಆರೋಗ್ಯ ಇಲಾಖೆ ಮಹತ್ವದ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಸಿರಿಧಾನ್ಯ ಆಧಾರಿತ ಲಘು ಉಪಾಹಾರ, ಹಣ್ಣು–ತರಕಾರಿ ಸಲಾಡ್‌ಗಳು ಹಾಗೂ ಕಡಿಮೆ ಕೊಬ್ಬು–ಕಡಿಮೆ ಸಕ್ಕರೆ ಪದಾರ್ಥಗಳನ್ನು ನೀಡಲು ಶಿಫಾರಸು ಮಾಡಲಾಗಿದೆ.

ಸಂಸ್ಕರಿಸಿದ, ಹುರಿದ ಹಾಗೂ ಹೆಚ್ಚಿನ ಸಕ್ಕರೆಯ ಪದಾರ್ಥಗಳನ್ನು ತಪ್ಪಿಸಲು ಇಲಾಖೆ ಸೂಚಿಸಿದ್ದು, ಸರ್ಕಾರಿ ಕಚೇರಿಗಳಲ್ಲಿ ಆರೋಗ್ಯ ರಕ್ಷಣೆ, ನೈರ್ಮಲ್ಯ ಮತ್ತು ಉತ್ತಮ ಆಹಾರ ಪದ್ಧತಿಗಳನ್ನು ಬೆಳೆಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಸರ್ಕಾರದ ಕಾರ್ಯಕ್ರಮಗಳಲ್ಲಿ ನೀಡಲಾಗುವ ಆಹಾರವು ಪೌಷ್ಟಿಕಾಂಶದ ಮಾನದಂಡಗಳಿಗೆ ಹೊಂದಿಕೆಯಾಗುವುದಿಲ್ಲ ಎಂಬ ವಿಚಾರವನ್ನು ಇಲಾಖೆ ಗಮನಕ್ಕೆ ತಂದಿದೆ.

ಆಂತರಿಕ ಸಭೆಗಳಲ್ಲಿ ಸಿರಿಧಾನ್ಯ ತಿಂಡಿಗಳು, ಹೆಚ್ಚಿನ ಫೈಬರ್ ಹೊಂದಿದ ಆಹಾರ ಹಾಗೂ ಅಜಿನೊಮೊಟೋ ರಹಿತ ಪದಾರ್ಥಗಳನ್ನು ಬಳಸುವಂತೆ ಸಲಹೆ ನೀಡಲಾಗಿದೆ. ತಾಜಾ ಹಣ್ಣುಗಳು, ತರಕಾರಿ ಸಲಾಡ್‌ಗಳು, ಮೊಳಕೆಕಾಳುಗಳು ಮತ್ತು ಉಪ್ಪುರಹಿತ ಬೀಜಗಳನ್ನು ನೀಡಲು ಪ್ರೋತ್ಸಾಹಿಸಲಾಗಿದೆ. ಪಾನೀಯಗಳಲ್ಲಿ ಗ್ರೀನ್ ಟೀ, ಕಡಿಮೆ ಕೊಬ್ಬಿನ ಮಜ್ಜಿಗೆ ಹಾಗೂ ಫಿಲ್ಟರ್ ಮಾಡಿದ ನೀರಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ.

ದೊಡ್ಡ ಕಾರ್ಯಕ್ರಮಗಳಲ್ಲಿ ಕನಿಷ್ಠ ಒಂದು ರಾಗಿ ಆಧಾರಿತ ತಿಂಡಿ ಮತ್ತು ಎರಡು ರಾಗಿ ಭಕ್ಷ್ಯಗಳನ್ನು ಒಳಗೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ. ಬಿಳಿ ಅಕ್ಕಿಯ ಬದಲಿಗೆ ಕಂದು ಅಕ್ಕಿ ಬಳಕೆ, ಸ್ಥಳೀಯ ಆಹಾರ ಪದ್ಧತಿಗಳನ್ನು ಪ್ರೋತ್ಸಾಹಿಸುವುದಕ್ಕೂ ಒತ್ತು ನೀಡಲಾಗಿದೆ. ಮಾಂಸಾಹಾರದಲ್ಲಿ ತೆಳ್ಳಗಿನ ಮತ್ತು ಚೆನ್ನಾಗಿ ಬೇಯಿಸಿದ ಮಾಂಸ ಬಳಸುವಂತೆ ಸೂಚಿಸಲಾಗಿದೆ.

ಸರ್ಕಾರಿ ಕ್ಯಾಂಪಸ್‌ಗಳಲ್ಲಿನ ತಿನಿಸು ಕೇಂದ್ರಗಳಿಗೂ ಮಾರ್ಗಸೂಚಿ ಅನ್ವಯವಾಗಿದ್ದು, ರಾಗಿ, ತರಕಾರಿ ಹಾಗೂ ಕಡಲೆ, ಜೋಳದಂತಹ ದ್ವಿದಳ ಧಾನ್ಯಗಳನ್ನು ಕಡ್ಡಾಯವಾಗಿ ಸೇರಿಸಲು ಹೇಳಲಾಗಿದೆ. ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ತಡೆಯಲು ಮರುಬಳಕೆ ಮಾಡಬಹುದಾದ ಲೋಹದ ಪಾತ್ರೆಗಳನ್ನು ಬಳಸುವಂತೆ ಸೂಚಿಸಲಾಗಿದೆ.

ಇದೇ ವೇಳೆ ಕಾರ್ಬೊನೇಟೆಡ್ ಪಾನೀಯಗಳು, ಹೆಚ್ಚಿನ ಸಕ್ಕರೆ ರಸಗಳು ಹಾಗೂ ಆಲ್ಕೋಹಾಲ್‌ಗಳನ್ನು ಸಂಪೂರ್ಣವಾಗಿ ನಿರಾಕರಿಸಲಾಗಿದೆ. ಆಹಾರ ತಯಾರಿಕೆ ಮತ್ತು ವಿತರಣೆಯಲ್ಲಿ ಕಟ್ಟುನಿಟ್ಟಾದ ನೈರ್ಮಲ್ಯ ಕಾಪಾಡುವಂತೆ ಇಲಾಖೆ ಸೂಚಿಸಿದೆ.
ಈ ಕ್ರಮದ ಮೂಲಕ ಸ್ಥಳೀಯ ಸ್ವಸಹಾಯ ಗುಂಪುಗಳು, ಗುಡಿ ಕೈಗಾರಿಕೆಗಳು ಹಾಗೂ ಸುಸ್ಥಿರ ಆಹಾರ ವ್ಯವಸ್ಥೆಗಳನ್ನು ಬೆಂಬಲಿಸುವ ಉದ್ದೇಶವೂ ಹೊಂದಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ಆರೋಗ್ಯಕರ ಹಾಗೂ ಜವಾಬ್ದಾರಿಯುತ ಆಹಾರ ಬಳಕೆಯತ್ತ ಇದು ಮಹತ್ವದ ಹೆಜ್ಜೆಯಾಗಿ ಪರಿಣಮಿಸಲಿದೆ.

LEAVE A REPLY

Please enter your comment!
Please enter your name here