ಬೀದಿ ವ್ಯಾಪಾರಿಗಳ ಸಮಸ್ಯೆ ಪರಿಹಾರಕ್ಕೆ ಆಗ್ರಹ: ಇಂದು ಧರಣಿ ಸತ್ಯಾಗ್ರಹ

0
5

ಸಿಂಧನೂರು, ಏ.13: ನಗರದ ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಒತ್ತಾಯಿಸಿ ಇಂದು ಸರಕಾರಿ ಹಣ್ಣಿನ ತೋಟದ ಮುಂದೆ ವ್ಯಾಪಾರಿಗಳು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

ನಗರದ ವ್ಯಾಪಾರಿಗಳಿಗೆ ಪುಟ್‌ಪಾತ್ ಮೇಲೆ ಪುನಃ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕು ಹಾಗೂ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂಬ ಬೇಡಿಕೆಗಳ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆಸಲಾಗುತ್ತಿದೆ. ಇದಕ್ಕೂ ಮೊದಲು 03-01-2026 ರಂದು ಮುಖ್ಯಮಂತ್ರಿಗಳ ಭೇಟಿ ವೇಳೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದರೂ, ಶಾಸಕ ಬಾದರ್ಲಿ ಹಂಪನಗೌಡ ಅವರು ಹೋರಾಟ ಸಮಿತಿಯವರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆ ಹಿಂಪಡೆಯಲಾಗಿತ್ತು.

ಅದೇ ರೀತಿ 06-01-2026 ರಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಹೇಳಲಾಗಿದ್ದರೂ, ಇಂದಿನವರೆಗೂ ಸಭೆ ನಡೆಯದೆ ಇರುವುದಾಗಿ ವ್ಯಾಪಾರಿಗಳು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿಗಳು 15 ದಿನಗಳೊಳಗೆ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವುದಾಗಿ ಹೇಳಿದ್ದರೂ, ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದರ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.

ಹೈಕೋರ್ಟ್ ಮತ್ತು ಭೂ ಕಬಳಿಕೆ ನಿಷೇಧ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಮುಖ್ಯ ರಸ್ತೆಯ ಮಧ್ಯ ಭಾಗದಿಂದ 21 ಮೀಟರ್ ವ್ಯಾಪ್ತಿಯಲ್ಲಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸದೇ ಇರುವುದನ್ನು ವ್ಯಾಪಾರಿಗಳು ಖಂಡಿಸಿದ್ದಾರೆ.

ಮುಖ್ಯ ಬೇಡಿಕೆಗಳು:

  • ನಗರದಲ್ಲಿನ ವ್ಯಾಪಾರಿಗಳಿಗೆ ಪುಟ್‌ಪಾತ್ ಮೇಲೆ ವ್ಯಾಪಾರ ಮಾಡಲು ಪುನಃ ಅವಕಾಶ ಕಲ್ಪಿಸಬೇಕು
  • ಗಂಗಾವತಿ ರಸ್ತೆಯ ಸರಕಾರಿ ಹಣ್ಣಿನ ತೋಟದ ಪಕ್ಕದ ಖಾಲಿ ಜಾಗದಲ್ಲಿ ಬಾಡಿಗೆ ಆಧಾರದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬೇಕು
  • ಹಣ್ಣಿನ ತೋಟದ 4 ಎಕರೆ ಭೂಮಿಯನ್ನು ನಗರಸಭೆ ಲೀಸ್ ಪಡೆದು ಬೀದಿ ವ್ಯಾಪಾರಿಗಳಿಗೆ ಹಂಚಿಕೆ ಮಾಡಬೇಕು
  • ರಾಯಚೂರು-ಗಂಗಾವತಿ ಹಾಗೂ ಕುಷ್ಟಗಿ ರಸ್ತೆಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು

14 ತಿಂಗಳಿನಿಂದ ಪರ್ಯಾಯ ವ್ಯವಸ್ಥೆ ಇಲ್ಲ

ನಗರದ ಬೀದಿ ವ್ಯಾಪಾರಿಗಳ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿ 14 ತಿಂಗಳು ಕಳೆದರೂ ಪರ್ಯಾಯ ವ್ಯವಸ್ಥೆ ಕಲ್ಪಿಸದಿರುವುದರಿಂದ ಸಾವಿರಾರು ವ್ಯಾಪಾರಿಗಳು ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಸಾಲದ ಬಾಧೆಯಿಂದ ಕೆಲವರು ಆತ್ಮಹತ್ಯೆಗೆ ಮುಂದಾಗಿರುವುದಾಗಿ ತಿಳಿದುಬಂದಿದೆ.

ವ್ಯಾಪಾರಿಗಳು ಸರ್ಕಾರ ಮತ್ತು ಆಡಳಿತದಿಂದ ನೀಡಲಾದ ಭರವಸೆಗಳು ಇಂದಿಗೂ ಈಡೇರದಿರುವುದನ್ನು ಖಂಡಿಸಿ, ತಕ್ಷಣ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದ್ದಾರೆ ಎಂದು ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಖಾಸಿಂ ಸಾಬ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here