ಬೆಂಗಳೂರು–ಮಂಗಳೂರು ವಾರಾಂತ್ಯ ಸಂಚಾರಕ್ಕೆ ವಿಶೇಷ ರೈಲು ಅಗತ್ಯ: ಕೇಂದ್ರಕ್ಕೆ ಬ್ರಿಜೇಶ್ ಚೌಟ ಮನವಿ

0
9
Advertisement

ಬೆಂಗಳೂರು, ಮಾ.20: ಬೆಂಗಳೂರು ಮತ್ತು ಮಂಗಳೂರು ನಡುವಿನ ಸಂಚಾರದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಒತ್ತಡದ ಹಿನ್ನೆಲೆಯಲ್ಲಿ, ವಾರಾಂತ್ಯ ವಿಶೇಷ ರೈಲು ಸೇವೆ ಆರಂಭಿಸುವಂತೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಅವರು, ಕರಾವಳಿ ಕರ್ನಾಟಕದ ಅನೇಕ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಬೆಂಗಳೂರಿನಲ್ಲಿ ವಾಸವಿದ್ದು, ವಾರಾಂತ್ಯಗಳಲ್ಲಿ ತಮ್ಮ ಸ್ವಗ್ರಾಮಗಳಿಗೆ ತೆರಳುತ್ತಾರೆ ಎಂದು ತಿಳಿಸಿದ್ದಾರೆ. ಆದರೆ ಪ್ರಸ್ತುತ ಬೆಂಗಳೂರು–ಮಂಗಳೂರು ನಡುವೆ ವಾರಾಂತ್ಯಕ್ಕೆ ವಿಶೇಷವಾಗಿ ಮೀಸಲಾದ ರೈಲು ಸೇವೆ ಇಲ್ಲದಿರುವುದರಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದರಿಂದ ರೈಲುಗಳಲ್ಲಿ ದೀರ್ಘ ನಿರೀಕ್ಷಾ ಪಟ್ಟಿ, ಗದ್ದಲ ಹಾಗೂ ಅಸೌಕರ್ಯ ಹೆಚ್ಚಾಗಿದೆ. ವಿಶೇಷವಾಗಿ ವಾರಾಂತ್ಯಗಳಲ್ಲಿ ಈ ಸಮಸ್ಯೆ ತೀವ್ರವಾಗಿದ್ದು, ಪ್ರಯಾಣ ಸುಗಮಗೊಳಿಸಲು ವಿಶೇಷ ರೈಲು ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ, ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹೊರಡುವ ಮತ್ತು ಭಾನುವಾರ ಸಂಜೆ ಮಂಗಳೂರು ಸೆಂಟ್ರಲ್‌ನಿಂದ ಹಿಂದಿರುಗುವ ವಾರಾಂತ್ಯ ವಿಶೇಷ ರೈಲು ಸೇವೆಯನ್ನು ಪ್ರಾರಂಭಿಸುವಂತೆ ಅವರು ಮನವಿ ಮಾಡಿದ್ದಾರೆ. ಇಂತಹ ಸೇವೆಯಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುವುದರ ಜೊತೆಗೆ ಇತರೆ ರೈಲುಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಬೇಡಿಕೆಗೆ ತ್ವರಿತವಾಗಿ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರನ್ನು ಅವರು ವಿನಂತಿಸಿದ್ದಾರೆ.

Advertisement

LEAVE A REPLY

Please enter your comment!
Please enter your name here