
ಶ್ರೀ ವಿಜಯಪುರಂ, ಫೆ.24: ಉತ್ತರ ಮತ್ತು ಮಧ್ಯ ಅಂಡಮಾನ್ ಜಿಲ್ಲೆಯ ರಂಗಟ್‌ನಿಂದ ಮಂಗಳವಾರ ಬೆಳಗ್ಗೆ ಹಾರಿದ ಪವನ್ ಹನ್ಸ್ ಹೆಲಿಕಾಪ್ಟರ್ ಸಮುದ್ರದಲ್ಲಿ ಪತನಗೊಂಡ ಘಟನೆ ವರದಿಯಾಗಿದೆ. ಇಬ್ಬರು ಸಿಬ್ಬಂದಿ ಸೇರಿ ಒಟ್ಟು ಏಳು ಜನರನ್ನು ಹೊತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾದರೂ, ಅದೃಷ್ಟವಶಾತ್ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ 9.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಶ್ರೀ ವಿಜಯಪುರಂನಿಂದ ಬೆಳಗ್ಗೆ 8.45ರ ವೇಳೆಗೆ ಟೇಕಾಫ್ ಆದ ಹೆಲಿಕಾಪ್ಟರ್, ಕೆಲವೇ ಸಮಯದಲ್ಲಿ ಸಮುದ್ರಕ್ಕೆ ಅಪ್ಪಳಿಸಿದೆ ಎಂದು ತಿಳಿದುಬಂದಿದೆ.
ಸಮುದ್ರದ ಮಧ್ಯದಿಂದ ರಕ್ಷಿಸಲ್ಪಟ್ಟ ಐದು ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣವಾಗಿದ್ದು, ಪೈಲಟ್ ಸಮುದ್ರದಲ್ಲಿ ಕ್ರ್ಯಾಶ್-ಲ್ಯಾಂಡಿಂಗ್ ನಡೆಸಿದ್ದಾರೆ ಎಂದು ಹಿರಿಯ ನಾಗರಿಕ ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಾಯಗೊಂಡ ಎಲ್ಲರೂ ಮಾಯಾಬಂದರ್‌ನ ಡಾ. ರಾಜೇಂದ್ರ ಪ್ರಸಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳನ್ನು ಮುಂದಿನ ಚಿಕಿತ್ಸೆಗಾಗಿ ಶ್ರೀ ವಿಜಯಪುರಂಗೆ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





