ಅಪ್ಪ ಅಂದರೆ..?!

0
45
Advertisement

ಲೇಖಕರು:ಗಣೇಶ ರಾಮಚಂದ್ರ ಮಾಂಡ್ರೆ
ಸಾಹಿತಿಗಳು, ಅರಿವು ಭೋಧಿ ಪ್ರಕಾಶನ

ಒಂದು ದಿನ ಜಾತ್ರೆಯ ಸಂಭ್ರಮ. ಎಲ್ಲೆಲ್ಲೂ ದೀಪಗಳ ಬೆಳಕು, ಜನರ ಗದ್ದಲ, ನಗುವಿನ ಶಬ್ದ. ಆ ಜಾತ್ರೆಗೆ ಅಪ್ಪು ತನ್ನ ಪುಟ್ಟ ಮಗುವನ್ನು ಕೈಹಿಡಿದು ಕರೆತಂದಿದ್ದ.
ಅಪ್ಪ ತುಂಬಾ ಬಡವ. ಜೇಬಿನಲ್ಲಿ ಹಣವೇ ಇರಲಿಲ್ಲ. ಆದರೆ ಮಗುವಿನ ಕಣ್ಣುಗಳಲ್ಲಿ ಜಾತ್ರೆಯ ಕನಸುಗಳು.
“ಅಪ್ಪಾ… ನನಗೆ ತಿಂಡಿ ಕೊಡಿಸು,”
“ಅಪ್ಪಾ… ಬಲೂನ್ ಕೊಡಿಸು,”
“ಅಪ್ಪಾ… ಹೊಸ ಅಂಗಿ ಬೇಕು…”
ಮಗು ಒಂದರ ನಂತರ ಒಂದಾಗಿ ಕೇಳುತ್ತಲೇ ಇತ್ತು. ಅಪ್ಪನ ಮನಸ್ಸು ಕಣ್ಣೀರಾಗಿತ್ತು. “ಇಲ್ಲಪ್ಪಾ… ಇವತ್ತು ಆಗಲ್ಲ,” ಎಂದು ಹೇಳುವಾಗ ಅಪ್ಪನ ಹೃದಯ ಒಡೆದಿತ್ತು. ಜಾತ್ರೆಯ ಗದ್ದಲ ಹೆಚ್ಚುತ್ತಾ ಹೋಯಿತು. ಒಂದು ಕ್ಷಣದ ಅಜಾಗರೂಕತೆಯಲ್ಲಿ ಮಗು ಅಪ್ಪನ ಕೈ ಬಿಡಿಸಿಕೊಂಡಿತು.
ಅಪ್ಪ ಹುಡುಕಿದ… ಮಗು ಅಪ್ಪನನ್ನು ಹುಡುಕಿತು… ಆ ಗದ್ದಲದ ನಡುವೆ ಅಪ್ಪ ಕಾಣಲಿಲ್ಲ… ಮಗು ಕಾಣಲಿಲ್ಲ… ಜನರು ಸೇರಿದರು. ಮಗು ಜೋರಾಗಿ ಅಳುತ್ತಿತ್ತು.
ಒಬ್ಬರು ಹೇಳಿದರು —“ತಿಂಡಿ ಬೇಕಾ?”
ಇನ್ನೊಬ್ಬರು —“ಚಾಕ್ಲೇಟ್ ಬೇಕಾ?”
ಮತ್ತೊಬ್ಬರು —“ಬಲೂನ್? ಐಸ್‌ಕ್ರೀಂ? ಆಟಿಕೆ ಬೇಕಾ?”
ಮಗು ಕಣ್ಣೀರಿನ ನಡುವೆ ತಲೆ ನಡುಗಿಸಿ ಹೇಳಿತು —“ನನಗೆ ಏನೂ ಬೇಡ… ನನಗೆ ಅಪ್ಪ ಬೇಕು…”
ಆ ಕ್ಷಣದಲ್ಲಿ ಎಲ್ಲರಿಗೂ ಅರ್ಥವಾಯಿತು — ತಿಂಡಿ, ಆಟಿಕೆ, ಬಲೂನ್ ಎಲ್ಲವೂ ಕ್ಷಣಿಕ.
ಆದರೆ ಅಪ್ಪ — ಅವನು ಸಂಬಂಧ.
ಅವನು ಉಸಿರು.
ಅವನು ಜೀವನ.
ಬಡತನ ಇದ್ದರೂ
ಅಪ್ಪನ ಪ್ರೀತಿ ಅಮೀರವಾಗಿತ್ತು.
ಜಾತ್ರೆಯ ಗದ್ದಲದ ಮಧ್ಯೆ, ಆ ಪುಟ್ಟ ಹೃದಯ ಹೇಳಿದ ಸತ್ಯ — ಕರುಳು ಸಂಬಂಧಕ್ಕೆ ಬೆಲೆ ಹಾಕಲು ಯಾರಿಂದಲೂ ಆಗಲ್ಲ.

Advertisement

LEAVE A REPLY

Please enter your comment!
Please enter your name here