
ವಿಜಯಪುರ, ಫೆ.03: ವಿಜಯಪುರ ಜಿಲ್ಲೆಯ ಹಲವಾರು ಸಾಹಿತಿಗಳ ಮೌಲ್ಯಯುತ ಕೃತಿಗಳು ಪುಸ್ತಕ ಅಂಗಡಿಗಳಲ್ಲಿ ಅಲಭ್ಯವಾಗಿರುವುದು ಸಾಹಿತ್ಯಾಸಕ್ತರಲ್ಲಿ ನಿರಾಸೆ ಮೂಡಿಸಿದೆ. ಜಿಲ್ಲೆಯ ನೆಲದ ಗಟ್ಟಿ ಸಾಹಿತ್ಯವನ್ನು ಓದುಗರಿಗೆ ತಲುಪಿಸಬೇಕಾದ ಅಗತ್ಯತೆ ಅರಿತು ‘ತನು ಫೌಂಡೇಶನ್’ ಲೇಖಕರಿಗಾಗಿ ವಿಶೇಷ ಯೋಜನೆಯನ್ನು ಆರಂಭಿಸಿದೆ.
ಜಿಲ್ಲೆಯ ಲೇಖಕರ ಪುಸ್ತಕಗಳು ಅಪರೂಪವಾಗಿ ಮಾತ್ರ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಹಿನ್ನೆಲೆಯಲ್ಲಿ, ಪುಸ್ತಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಯೋಜನೆಯಡಿ ಲೇಖಕರು ತಮ್ಮ ಪ್ರಕಟಿತ ಪುಸ್ತಕಗಳನ್ನು ತನು ಫೌಂಡೇಶನ್‌ಗೆ ನೀಡಿದರೆ, ಸಂಸ್ಥೆಯು ಅವುಗಳನ್ನು ಓದುಗರಿಗೆ ತಲುಪಿಸುವ ಹೊಣೆ ಹೊರುತ್ತದೆ ಎಂದು ‘ತನು ಫೌಂಡೇಶನ್’ ನಿರ್ದೇಶಕರಾದ ವಿಜು ಗೌಡ ಹೇಳಿದ್ದಾರೆ.
ಮಾರಾಟವಾಗುವ ಪುಸ್ತಕಗಳ ಸಂಪೂರ್ಣ ವೆಚ್ಚವನ್ನು ಸಂಬಂಧಿತ ಲೇಖಕರಿಗೇ ನೀಡಲಾಗುತ್ತದೆ ಎಂದು ಫೌಂಡೇಶನ್ ತಿಳಿಸಿದೆ. ಇದರಿಂದ ಲೇಖಕರಿಗೆ ನ್ಯಾಯಸಮ್ಮತ ಆದಾಯ ದೊರೆಯುವುದರ ಜೊತೆಗೆ, ಜಿಲ್ಲೆಯ ಸಾಹಿತ್ಯ ಕೃತಿಗಳು ವಿಸ್ತೃತ ಓದುಗರ ವಲಯಕ್ಕೆ ತಲುಪುವ ಸಾಧ್ಯತೆ ಹೆಚ್ಚಲಿದೆ.
ಜಿಲ್ಲೆಯ ಎಲ್ಲಾ ಸಾಹಿತಿಗಳು ಈ ಅವಕಾಶದ ಸದುಪಯೋಗ ಪಡೆದುಕೊಂಡು, ಪುಸ್ತಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಕೈಜೋಡಿಸಬೇಕೆಂದು ತನು ಫೌಂಡೇಶನ್ ಮನವಿ ಮಾಡಿದೆ. ಆಸಕ್ತರು ದೂರವಾಣಿ ಸಂಖ್ಯೆ:9743235649 ರ ಮೂಲಕ ಸಂಪರ್ಕಿಸಲು ಕೋರಲಾಗಿದೆ.





