
ನವದೆಹಲಿ, ಫೆ.03: ದೇಶದಲ್ಲಿ ವೈಯಕ್ತಿಕ ಮಾಹಿತಿ ರಕ್ಷಣೆಗೆ ಸಮಗ್ರ ಕಾನೂನು ಅಗತ್ಯವಿದೆ ಎಂದು ಖ್ಯಾತ ಬ್ಲಾಗರ್ ಅನ್ಶುಲ್ ಸಕ್ಸೇನಾ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
2021ರಲ್ಲಿ ವಾಟ್ಸಾಪ್ ತನ್ನ ಹೊಸ ಗೌಪ್ಯತಾ ನೀತಿಯನ್ನು ಭಾರತದಲ್ಲಿ ಜಾರಿಗೊಳಿಸಲು ಮುಂದಾದಾಗ, ಸರ್ಕಾರ ಹಾಗೂ ಬಳಕೆದಾರರಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಕಂಪನಿ ಆ ನೀತಿ ಜಾರಿಗೆ ತಾತ್ಕಾಲಿಕ ವಿರಾಮ ನೀಡಿತು. ಆದರೆ ಇದೇ ನೀತಿಯನ್ನು ಯುರೋಪಿನ ರಾಷ್ಟ್ರಗಳಲ್ಲಿ ಜಾರಿಗೊಳಿಸಲು ವಾಟ್ಸಾಪ್ ಯಾಕೆ ಮುಂದಾಗಲಿಲ್ಲ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದರ ಉತ್ತರ, ಯುರೋಪಿಯನ್ ಯೂನಿಯನ್‌ನಲ್ಲಿ ಜಾರಿಯಲ್ಲಿರುವ ಜನರಲ್ ಡೇಟಾ ಪ್ರೊಟೆಕ್ಷನ್ ರೆಗ್ಯುಲೇಶನ್ (ಜಿಡಿಪಿಆರ್) ಎಂಬ ಕಠಿಣ ಡೇಟಾ ರಕ್ಷಣಾ ಕಾನೂನಲ್ಲಿದೆ.
ಭಾರತದಲ್ಲಿ ಇನ್ನೂ ಸಮಗ್ರ ವೈಯಕ್ತಿಕ ಡೇಟಾ ಸಂರಕ್ಷಣಾ ಕಾನೂನು ಜಾರಿಯಾಗಿಲ್ಲದ ಕಾರಣ, ಇಂತಹ ವಿವಾದಗಳು ಮುಂದೆಯೂ ಮರುಕಳಿಸುವ ಸಾಧ್ಯತೆ ಇದೆ. ಇಂದು ವಾಟ್ಸಾಪ್‌ನ ವಿಚಾರವಾಗಿದ್ದರೆ, ನಾಳೆ ಅದು ಇನ್ನೊಂದು ಡಿಜಿಟಲ್ ವೇದಿಕೆಯ ಸಮಸ್ಯೆಯಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಸರ್ಕಾರದ ಆಕ್ಷೇಪಣೆಗಳು ಅಥವಾ ನ್ಯಾಯಾಲಯಗಳ ಮಧ್ಯಸ್ಥಿಕೆಗಳ ಮೇಲೆ ಅವಲಂಬಿಸುವುದು ಶಾಶ್ವತ ಪರಿಹಾರವಲ್ಲ. ನಾಗರಿಕರ ವೈಯಕ್ತಿಕ ಮಾಹಿತಿಗೆ ಸಮರ್ಪಕ ಮತ್ತು ಸಮಾನ ರಕ್ಷಣೆಯನ್ನು ಒದಗಿಸಲು ಸ್ಪಷ್ಟವಾದ ಕಾನೂನು ಚೌಕಟ್ಟು ಅಗತ್ಯವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವೈಯಕ್ತಿಕ ಡೇಟಾ ಸಂರಕ್ಷಣಾ ಕಾನೂನು ಈಗ ಆಯ್ಕೆಯಲ್ಲ, ಅನಿವಾರ್ಯತೆಯಾಗಿದೆ. ಇದು ಭಾರತದ ಡಿಜಿಟಲ್ ಭವಿಷ್ಯಕ್ಕೆ ಅತ್ಯಗತ್ಯವಾಗಿದೆ ಎಂದು ಅನ್ಶುಲ್ ಸಕ್ಸೇನಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.





