
ಬೆಂಗಳೂರು, ಜ.24: ಲ್ಯಾಂಡ್ ಲಾರ್ಡ್ ಚಿತ್ರದ ನಾಯಕ ನಟ ದುನಿಯಾ ವಿಜಯ್ ಅವರು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ತಮ್ಮ ಹೊಸ ಚಿತ್ರ ವೀಕ್ಷಣೆಗೆ ಆಹ್ವಾನ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಲ್ಯಾಂಡ್ ಲಾರ್ಡ್ ಚಿತ್ರತಂಡದವರು ಇಂದು ನನ್ನನ್ನು ಭೇಟಿಯಾಗಿ ತಮ್ಮ ಚಿತ್ರ ವೀಕ್ಷಣೆಗೆ ಪ್ರೀತಿಯಿಂದ ಆಹ್ವಾನಿಸಿದರು” ಎಂದು ತಿಳಿಸಿದ್ದಾರೆ.
ಚಿತ್ರದ ಮೂಲಕ ಸಮಾಜದಲ್ಲಿನ ಜಾತಿ ಅಸಮಾನತೆ ಹಾಗೂ ಸಾಂವಿಧಾನಿಕ ಮೌಲ್ಯಗಳ ಕುರಿತು ಬೆಳಕು ಚೆಲ್ಲುವ ದಿಟ್ಟ ಪ್ರಯತ್ನ ಮಾಡಲಾಗಿದೆ ಎಂದು ಸಿಎಂ ಪ್ರಶಂಸಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕಳಕಳಿಯ ಕಥಾಹಂದರ ಹೊಂದಿರುವ ಚಿತ್ರಗಳು ವಿರಳವಾಗಿದ್ದು, ಈ ಹಿನ್ನೆಲೆಯಲ್ಲಿ ‘ಲ್ಯಾಂಡ್ ಲಾರ್ಡ್’ ಗಮನಾರ್ಹ ಪ್ರಯತ್ನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾಯಕ ನಟನಾಗಿ ದುನಿಯಾ ವಿಜಯ್ ಅಭಿನಯಿಸಿರುವ ಈ ಸಿನಿಮಾ ಶತದಿನೋತ್ಸವವನ್ನು ಪೂರೈಸಲಿ. ಇಂತಹ ಇನ್ನಷ್ಟು ಸಾಮಾಜಿಕ ಸಂದೇಶ ಸಾರುವ ಚಿತ್ರಗಳು ಮೂಡಿಬರಲು ‘ಲ್ಯಾಂಡ್ ಲಾರ್ಡ್’ ಪ್ರೇರಣೆಯಾಗಲಿ ಎಂದು ಅವರು ಹಾರೈಸಿದ್ದಾರೆ.
“ಇದು ಎಲ್ಲರೂ ನೋಡಲೇಬೇಕಾದ ಚಿತ್ರ. ನಾನೂ ಖಂಡಿತವಾಗಿ ಚಿತ್ರಮಂದಿರಕ್ಕೆ ತೆರಳಿ ಈ ಸಿನಿಮಾ ವೀಕ್ಷಿಸುತ್ತೇನೆ. ನೀವೂ ನೋಡಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ





