
ಬಳ್ಳಾರಿ, ಜ.24:ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ್ದ ಬಳ್ಳಾರಿ ಬ್ಯಾನರ್ ಗಲಾಟೆ ಹಾಗೂ ಕಾಂಗ್ರೆಸ್ ಕಾರ್ಯಕರ್ತನ ಗುಂಡೇಟು ಪ್ರಕರಣ ಮಾಸುವ ಮುನ್ನವೇ ಬಳ್ಳಾರಿಯಲ್ಲಿ ಮತ್ತೊಂದು ಬೆಂಕಿ ಅವಘಡ ಸಂಭವಿಸಿದ್ದು, ರಾಜಕೀಯ ವಲಯದಲ್ಲಿ ಮತ್ತೆ ಅಲ್ಲೋಲ–ಕಲ್ಲೋಲಕ್ಕೆ ಕಾರಣವಾಗಿದೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮುಲು ಅವರಿಗೆ ಸೇರಿದ ಕಂಟೋನ್ಮೆಂಟ್ ಪ್ರದೇಶದ ಜಿ–ಸ್ಟಾರ್ ಲೇಔಟ್‌ನಲ್ಲಿರುವ ಮಾಡೆಲ್ ಹೌಸ್ ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಈ ಕೃತ್ಯದ ಹಿಂದೆ ಕಾಂಗ್ರೆಸ್ ಕಾರ್ಯಕರ್ತರ ಕೈವಾಡವಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಜನಾರ್ದನ ರೆಡ್ಡಿ ಅವರು ತಮ್ಮ ಮಾಲೀಕತ್ವದ ಜಿ–ಸ್ಟಾರ್ ಲೇಔಟ್‌ನಲ್ಲಿ ಸುಮಾರು 73 ಕೋಟಿ ರೂ. ವೆಚ್ಚದಲ್ಲಿ ಗ್ರಾಹಕರಿಗೆ ಪ್ರದರ್ಶನಕ್ಕಾಗಿ ಮಾಡೆಲ್ ಹೌಸ್ ನಿರ್ಮಿಸಿದ್ದರು. ಆದರೆ, ಶುಕ್ರವಾರ ಸಂಜೆ ಸ್ಥಳಕ್ಕೆ ತೆರಳಿದ ದುಷ್ಕರ್ಮಿಗಳು ಮನೆಗೆ ನುಗ್ಗಿ ಬಾಗಿಲು, ಕಿಟಕಿಗಳನ್ನು ಮುರಿದು ಹಾಕಿ, ಗಾಜುಗಳನ್ನು ಒಡೆದು ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದರೆ, ಅಗ್ನಿಶಾಮಕ ಸಿಬ್ಬಂದಿ ಆಗಮಿಸುವ ವೇಳೆಗೆ ಮನೆಯ ಕಿಟಕಿಗಳು, ಕಂಬಗಳು ಹಾಗೂ ಕಟ್ಟಿಗೆಯಿಂದ ನಿರ್ಮಿತ ವಸ್ತುಗಳು ಸಂಪೂರ್ಣವಾಗಿ ಅಗ್ನಿಗಾಹುತಿಯಾಗಿದ್ದವು.
ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ರವಿಕುಮಾರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ, ಮಾಡೆಲ್ ಹೌಸ್ ಗೆ ಬೆಂಕಿ ಹಚ್ಚಿದ್ದಾನೆ ಎನ್ನಲಾದ ಯುವಕನೊಬ್ಬನ ಫೋಟೋವನ್ನು ಪೊಲೀಸರು ಮಾಧ್ಯಮಗಳಿಗೆ ಪ್ರದರ್ಶಿಸಿದರು.
ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ನಡೆದು ಗುಂಡಿನ ದಾಳಿ ಸಂಭವಿಸಿದ 23 ದಿನಗಳ ಬಳಿಕ ಈ ಘಟನೆ ನಡೆದಿದ್ದು, ಮತ್ತೊಂದು ಸುತ್ತಿನ ಆರೋಪ–ಪ್ರತ್ಯಾರೋಪಕ್ಕೆ ವೇದಿಕೆ ಸಿದ್ಧವಾದಂತಾಗಿದೆ.
ಇನ್ನು, ಘಟನೆ ಕುರಿತು ಪ್ರತಿಕ್ರಿಯಿಸಿದ ಶಾಸಕ ಜನಾರ್ದನ ರೆಡ್ಡಿ ಅವರ ಸಹೋದರ ಹಾಗೂ ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರು, “ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರೇ ಈ ಕೃತ್ಯದ ಹಿಂದಿದ್ದಾರೆ. ಬ್ಯಾನರ್ ಗಲಾಟೆ ವೇಳೆ ಜನಾರ್ದನ ರೆಡ್ಡಿ ಅವರ ಮನೆಯನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಲಾಗಿತ್ತು. ಅದು ಸಾಧ್ಯವಾಗದ ಕಾರಣ, ಬೆಂಬಲಿಗರ ಮೂಲಕ ಮಾದರಿ ಮನೆಗೆ ಬೆಂಕಿ ಹಚ್ಚಿಸಲಾಗಿದೆ” ಎಂದು ಆರೋಪಿಸಿದರು.
ಜನಾರ್ದನ ರೆಡ್ಡಿ ನಿವಾಸಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು. ಈ ಕೃತ್ಯದ ಹಿಂದಿರುವವರನ್ನು ಪತ್ತೆಹಚ್ಚಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಎಸ್ಪಿಗೆ ದೂರು ನೀಡುವುದಾಗಿ ಜಿ. ಸೋಮಶೇಖರ ರೆಡ್ಡಿ ತಿಳಿಸಿದ್ದಾರೆ. ಈ ನಡುವೆ, ಬೆಂಗಳೂರಿನಲ್ಲಿ ಇದ್ದ ಶಾಸಕ ಜನಾರ್ದನ ರೆಡ್ಡಿ ಅವರು ವಿಷಯ ತಿಳಿಯುತ್ತಿದ್ದಂತೆಯೇ ಬಳ್ಳಾರಿಗೆ ಆಗಮಿಸುತ್ತಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗಾಗಿ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಮತ್ತಷ್ಟು ಅಹಿತಕರ ಘಟನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಬಳ್ಳಾರಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಪ್ರಕರಣ ಸಂಬಂಧ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





