ಶಂಕರನಾಗ್ ಬದುಕಿದ್ದರೆ ಇಂದು ಕರ್ನಾಟಕದ ಮುಖ್ಯಮಂತ್ರಿಯಾಗಿರುತ್ತಿದ್ದರು : ನಿರ್ದೇಶಕ ಓಂ ಪ್ರಕಾಶ್ ರಾವ್

0
14

ಕನ್ನಡ ಚಿತ್ರರಂಗದಲ್ಲಿ ಅವರಂತಹ ಶ್ರಮಜೀವಿಯನ್ನು ನಾನು ಕಂಡಿಲ್ಲ; ನಟಿ ಭವ್ಯ ಪಾಟೀಲ್ ಮೆಚ್ಚುಗೆ

ಬಿ.ಪಿ. ನ್ಯೂಸ್ ಕರ್ನಾಟಕದ ವಾರ್ಷಿಕೋತ್ಸವ ಸಂಭ್ರಮ; ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಶಂಕರನಾಗ್ ಪ್ರಶಸ್ತಿ–2026’ ಪ್ರದಾನ

ಬೆಂಗಳೂರು, ನ.15: ಕನ್ನಡ ಚಿತ್ರರಂಗದ ಮೇರು ಪ್ರತಿಭೆ, ನಟ, ನಿರ್ದೇಶಕ ಹಾಗೂ ಬಹುಮುಖ ವ್ಯಕ್ತಿತ್ವದ ದಿವಂಗತ ಶಂಕರನಾಗ್ ಅವರು ಬದುಕಿದ್ದರೆ ಇಂದು ಕರ್ನಾಟಕದ ಮುಖ್ಯಮಂತ್ರಿಯಾಗುವ ಮಟ್ಟಕ್ಕೆ ಬೆಳೆದಿರುತ್ತಿದ್ದರು ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಓಂ ಪ್ರಕಾಶ್ ರಾವ್ ಅಭಿಪ್ರಾಯಪಟ್ಟರು.

ನಗರದ ಮಲ್ಲೇಶ್ವರಂನ ರೇಣುಕಾಂಬ ಡಿಜಿಟಲ್ ಸ್ಟುಡಿಯೋದಲ್ಲಿ ಭಾನುವಾರ ನಡೆದ ಬಿ.ಪಿ. ನ್ಯೂಸ್ ಕರ್ನಾಟಕದ ವಾರ್ಷಿಕೋತ್ಸವ ಹಾಗೂ ‘ಶಂಕರನಾಗ್ ಪ್ರಶಸ್ತಿ–2026’ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕನ್ನಡವೇ ಸಾರ್ವಭೌಮವಾಗಬೇಕು ಎಂಬ ಆಶಯದೊಂದಿಗೆ ಕನ್ನಡಕ್ಕಾಗಿ ದುಡಿದ ಅಪರೂಪದ ವ್ಯಕ್ತಿ ಶಂಕರನಾಗ್. ಅವರ ದೂರದೃಷ್ಟಿ, ಬಿಡುವಿಲ್ಲದ ಪರಿಶ್ರಮ, ಕ್ರಿಯಾಶೀಲತೆ ಮತ್ತು ವ್ಯಕ್ತಿತ್ವ ಇಂದಿನ ಯುವಜನತೆಗೆ ಮಾದರಿಯಾಗಬೇಕು. ಅವರನ್ನು ಮರೆತಿದ್ದರೆ ತಾನೆ ನೆನಪಿಸಿಕೊಳ್ಳುವುದಕ್ಕೆ; ಬದಲಾಗಿ ಅವರ ಬದುಕು, ಸಾಧನೆ ಮತ್ತು ಚಿಂತನೆಗಳನ್ನು ಇನ್ನಷ್ಟು ಆಳವಾಗಿ ತಿಳಿದುಕೊಳ್ಳಬೇಕು. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ನಟಿ ಭವ್ಯ ಪಾಟೀಲ್, ಶಂಕರನಾಗ್ ಅವರ ಕಾರ್ಯನಿಷ್ಠೆ ಮತ್ತು ಪರಿಶ್ರಮವನ್ನು ಸ್ಮರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

“ಶಂಕರನಾಗ್ ಅವರಂತಹ ಒಬ್ಬ ಶ್ರಮಜೀವಿಯನ್ನು ಕನ್ನಡ ಚಿತ್ರರಂಗದಲ್ಲಿ ನಾನು ಮತ್ತೊಬ್ಬರನ್ನು ನೋಡಿಲ್ಲ. ಅವರ ಕೆಲಸದ ವೇಗ, ಬದ್ಧತೆ ಹಾಗೂ ಸಿನಿಮಾ ಮೇಲಿನ ಪ್ರೀತಿ ನಿಜಕ್ಕೂ ಅನುಕರಣೀಯ. ನಾನು ಈವರೆಗೆ 13–14 ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಕನ್ನಡ ಚಿತ್ರರಂಗ ಕಂಡ ಅತ್ಯುನ್ನತ ಸಾಧಕರ ಹೆಸರಿನಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುವುದು ನಿಜಕ್ಕೂ ಹೆಮ್ಮೆಯ ಸಂಗತಿ” ಎಂದು ಹೇಳಿದರು.

ಶಂಕರನಾಗ್ ಹೆಸರಿನಲ್ಲಿ ಪ್ರಶಸ್ತಿ, ಮಾಲ್ಗುಡಿ ಹೆಸರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣವಾಗಲಿ: ಅರುಣ್ ಭೂಪಾಲ್

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ.ಪಿ. ನ್ಯೂಸ್ ಕರ್ನಾಟಕದ ಸಂಪಾದಕ ಅರುಣ್ ಭೂಪಾಲ್ ಮಾತನಾಡಿ, ಶಂಕರನಾಗ್ ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿದೆ ಎಂದರು.

“50ರಿಂದ 60 ಮಂದಿ ಸಾಧಕರಿಗೆ ಶಂಕರನಾಗ್ ಅವರ ಪುತ್ಥಳಿಯೊಂದಿಗೆ ಗೌರವ ಪ್ರಶಸ್ತಿ ನೀಡಬೇಕು ಎಂಬ ಸಂಕಲ್ಪ ಮಾಡಿದ್ದೇವೆ. ಈಗಾಗಲೇ ಸಾಧನೆ ಮಾಡಿದವರಿಗೆ ಮಾತ್ರವಲ್ಲದೆ, ಸಾಧನೆ ಮಾಡಬೇಕೆಂಬ ಹಂಬಲದಿಂದ ನಿರಂತರ ಪ್ರಯತ್ನ ಮಾಡುತ್ತಿರುವವರಿಗೂ ಶಂಕರನಾಗ್ ಅವರ ಆದರ್ಶಗಳು ಪ್ರೇರಣೆಯಾಗಬೇಕು. ನಮ್ಮೆಲ್ಲರೊಳಗೂ ಒಬ್ಬ ಶಂಕರನಾಗ್ ಇದ್ದಾರೆ. ಆ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಬಡಿದೆಬ್ಬಿಸುವ ಕೆಲಸವಾಗಬೇಕು” ಎಂದು ತಿಳಿಸಿದರು.

ಕರ್ನಾಟಕ ಸರ್ಕಾರ ಶಂಕರನಾಗ್ ಅವರ ಹೆಸರಿನಲ್ಲಿ ಅಧಿಕೃತ ಪ್ರಶಸ್ತಿಯನ್ನು ಘೋಷಿಸಬೇಕು. ಅಲ್ಲದೆ, ಅವರ ಸ್ಮರಣಾರ್ಥ ಅತ್ಯಾಧುನಿಕ ಫಿಲ್ಮ್ ಸಿಟಿಯೊಂದನ್ನು ನಿರ್ಮಿಸಿ ಅದಕ್ಕೆ ‘ಮಾಲ್ಗುಡಿ’ ಎಂದು ಹೆಸರಿಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ

ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕಾರ್ತಿಕ್ ಆಚಾರ್ಯ ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಕೃತಿ ಶಾಲೆಯ ಮಕ್ಕಳಿಂದ ನಡೆದ ಆಕರ್ಷಕ ನೃತ್ಯ ಪ್ರದರ್ಶನ ಸಮಾರಂಭಕ್ಕೆ ಸಾಂಸ್ಕೃತಿಕ ಮೆರುಗು ನೀಡಿತು. ಅತಿಥಿಗಳನ್ನು ಅರುಣ್ ಭೂಪಾಲ್ ಸನ್ಮಾನಿಸಿದರು. ತಿರುಮಲ ಕಾರ್ಯಕ್ರಮವನ್ನು ನಿರೂಪಿಸಿದರು.

ಜಿ.ಕೆ. ಗ್ರೂಪ್ ಆಫ್ ಕಂಪನೀಸ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಜಿ.ಕೆ. ಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ಹಿರಿಯ ನಟಿ ಭವ್ಯ ಪಾಟೀಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ

ಸಿನಿಮಾ, ಕಲೆ, ಸಾಹಿತ್ಯ, ಪತ್ರಿಕೋದ್ಯಮ, ಸಾಂಸ್ಕೃತಿಕ, ಸಾಮಾಜಿಕ ಸೇವೆ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ‘ಶಂಕರನಾಗ್ ಪ್ರಶಸ್ತಿ–2026’ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಮರಣೋತ್ತರ ಗೌರವ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಯಿತು.

ಪರಿಜ್ಞಾನ ಸಂಘ (ರಿ), ಬಳ್ಳಾರಿ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮವು ಶಂಕರನಾಗ್ ಅವರ ಕಲಾತ್ಮಕ ಕೊಡುಗೆ, ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಅಮೂಲ್ಯ ಸೇವೆ ಹಾಗೂ ಅವರ ಸಾಮಾಜಿಕ ಕಳಕಳಿಯನ್ನು ಸ್ಮರಿಸುವ ವೇದಿಕೆಯಾಯಿತು.

ಶಂಕರನಾಗ್ ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುವುದಷ್ಟೇ ಅಲ್ಲದೆ, ಅವರಲ್ಲಿದ್ದ ದೂರದೃಷ್ಟಿ, ಸಮಯಪ್ರಜ್ಞೆ, ಕಾರ್ಯದಕ್ಷತೆ ಮತ್ತು ಕನ್ನಡಪರ ಕಾಳಜಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಆಶಯದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here