ನಾಳೆ ಕರ್ನಾಟಕ ಬ್ಯಾಂಕ್ ನೌಕರರ ಮುಷ್ಕರ; ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಸಾಧ್ಯ!

0
2

ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಬೇಡಿಕೆಗಳ ಈಡೇರಿಕೆಗೆ ಆಗ್ರಹ; ನ.18ರಂದು ಒಂದು ದಿನದ ಮುಷ್ಕರಕ್ಕೆ ಎರಡು ಸಂಘಟನೆಗಳ ಕರೆ

ಬೆಂಗಳೂರು, ನ.17: ವಿವಿಧ ಮಾನವ ಸಂಪನ್ಮೂಲ (ಎಚ್‌ಆರ್) ಸಂಬಂಧಿತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಬ್ಯಾಂಕ್‌ನ ನೌಕರರು ಹಾಗೂ ಅಧಿಕಾರಿಗಳ ಎರಡು ಸಂಘಟನೆಗಳು ನವೆಂಬರ್ 18ರ ಬುಧವಾರ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿವೆ. ಹೀಗಾಗಿ ರಾಜ್ಯ ಸೇರಿದಂತೆ ದೇಶಾದ್ಯಂತ ಕರ್ನಾಟಕ ಬ್ಯಾಂಕ್‌ನ ಶಾಖೆಗಳ ಸಾಮಾನ್ಯ ಕಾರ್ಯಚಟುವಟಿಕೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

ಅಖಿಲ ಭಾರತ ಕರ್ನಾಟಕ ಬ್ಯಾಂಕ್ ನೌಕರರ ಸಂಘ (ಎಐಕೆಬಿಇಎ) ಮತ್ತು ಕರ್ನಾಟಕ ಬ್ಯಾಂಕ್ ಅಧಿಕಾರಿಗಳ ಸಂಘಟನೆ (ಕೆಬಿಒಒ) ಮುಷ್ಕರಕ್ಕೆ ಕರೆ ನೀಡಿರುವ ಸಂಘಟನೆಗಳಾಗಿವೆ. ಇವು ಕ್ರಮವಾಗಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಹಾಗೂ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ)ಗೆ ಸಂಯೋಜಿತವಾಗಿವೆ.

ಈ ಕುರಿತು ಕರ್ನಾಟಕ ಬ್ಯಾಂಕ್ ನವೆಂಬರ್ 16ರಂದು ಷೇರುಪೇಟೆಗಳಿಗೆ ಸಲ್ಲಿಸಿರುವ ನಿಯಂತ್ರಣಾತ್ಮಕ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಸೆಬಿಯ ಷೇರುಪೇಟೆ ಪಟ್ಟಿ ನಿಯಮಾವಳಿಗಳ 2015ರ ನಿಯಮ 30ರ ಅಡಿಯಲ್ಲಿ ಸಲ್ಲಿಸಿರುವ ಮಾಹಿತಿಯಂತೆ, ಬ್ಯಾಂಕ್‌ನ ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ವಿವಿಧ ಬೇಡಿಕೆಗಳ ಇತ್ಯರ್ಥಕ್ಕೆ ಆಗ್ರಹಿಸಿ ಸಂಘಟನೆಗಳು ಮುಷ್ಕರದ ನೋಟಿಸ್ ನೀಡಿವೆ.

ಮುಷ್ಕರ ಜಾರಿಗೊಂಡಲ್ಲಿ ನವೆಂಬರ್ 18ರಂದು ಬ್ಯಾಂಕ್‌ನ ಶಾಖೆಗಳು, ಆಡಳಿತ ಕಚೇರಿಗಳು ಹಾಗೂ ವಿವಿಧ ವಿಭಾಗಗಳ ದೈನಂದಿನ ಕಾರ್ಯಚಟುವಟಿಕೆಗಳಿಗೆ ಅಡಚಣೆಯಾಗಬಹುದು ಎಂದು ಬ್ಯಾಂಕ್ ತಿಳಿಸಿದೆ. ಗ್ರಾಹಕರಿಗೆ ತೊಂದರೆಯಾಗದಂತೆ ಸೇವೆಗಳನ್ನು ಸಹಜ ಸ್ಥಿತಿಯಲ್ಲಿ ಮುಂದುವರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಇದೇ ವೇಳೆ, ಮುಷ್ಕರದಿಂದ ಉಂಟಾಗಬಹುದಾದ ಆರ್ಥಿಕ ನಷ್ಟ ಹಾಗೂ ಬ್ಯಾಂಕ್‌ನ ಕಾರ್ಯಾಚರಣೆಗಳ ಮೇಲಿನ ಪರಿಣಾಮವನ್ನು ಸದ್ಯಕ್ಕೆ ನಿಖರವಾಗಿ ಅಂದಾಜಿಸಲು ಸಾಧ್ಯವಿಲ್ಲ ಎಂದು ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಗ್ರಾಹಕರಿಗೆ ಸೂಚನೆ: ಮುಷ್ಕರದ ಹಿನ್ನೆಲೆಯಲ್ಲಿ ಬುಧವಾರ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡುವ ಗ್ರಾಹಕರು ತಮ್ಮ ವಹಿವಾಟುಗಳನ್ನು ಮುಂಚಿತವಾಗಿ ಯೋಜಿಸಿಕೊಳ್ಳುವುದು ಸೂಕ್ತ.

LEAVE A REPLY

Please enter your comment!
Please enter your name here