ಮಲಯಾಳಂ ಚಿತ್ರರಂಗದ ಮೇರು ನಟ- ನಿರ್ದೇಶಕ ಶ್ರೀನಿವಾಸನ್ ನಿಧನ!

0
23
Advertisement

ತ್ರಿಪ್ಪುನಿತುರ, ಡಿ.20: ಮಲಯಾಳಂ ಸಿನಿಮಾರಂಗದ ಮೇರು ನಟ, ನಿರ್ದೇಶಕ ಹಾಗೂ ನಿರ್ಮಾಪಕರಾದ ಶ್ರೀನಿವಾಸನ್ ಇಂದು ಬೆಳಗ್ಗೆ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸನ್ ಅವರಿಗೆ ದಿಢೀರ್ ಆರೋಗ್ಯದಲ್ಲಿ ಏರುಪೇರು ಆಗಿದ್ದು, ತ್ರಿಪ್ಪುನಿತುರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ಅಸುನೀಗಿದ್ದಾರೆ.

ಮಲಯಾಳಂ ಸಿನಿರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದ ಶ್ರೀನಿವಾಸನ್ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾಗಳಲ್ಲಿ ಮೋಹನ್ ಲಾಲ್ ಮತ್ತು ಶ್ರೀನಿವಾಸನ್ ಜೋಡಿ ಬಹಳ ಹೆಸರುವಾಸಿಯಾಗಿದ್ದವು. ಸಿನಿಪ್ರೇಮಿಗಳಿಗೆ ಇಂದಿಗೂ ಅವರ ಸಿನಿಮಾಗಳು ಅಚ್ಚುಮೆಚ್ಚು. ಕೇರಳದಲ್ಲಿ ದಿನನಿತ್ಯ ನಡೆಯುವ ಜನರ ಬದುಕಿನ ಕಥೆಗಳನ್ನು ಚಿತ್ರಕಥೆಗಳ ಮೂಲಕ ನೈಜ್ಯವಾಗಿ ಬಿಂಬಿಸುತ್ತಿದ್ದರು ಶ್ರೀನಿವಾಸನ್.

ಸುಮಾರು 50 ಸಿನಿಮಾಗಳಿಗೆ ಚಿತ್ರ ಕಥೆ ಬರೆದಿರುವ ಶ್ರೀನಿವಾಸನ್, ಹಾಸ್ಯಗಳ ಮೂಲಕ ಒಬ್ಬ ಸಾಮಾನ್ಯ ಮನುಷ್ಯ ಜೀವನಕ್ಕಾಗಿ ಹೋರಾಡುವುದನ್ನು ತೆರೆಮೇಲೆ ತರುತ್ತಿದ್ದರು. ನಾಡೋಡಿಕಾಟ್ಟ್, ಸಂದೇಶಂ, ಪಟ್ಟನಪ್ರವೇಶಮ್, ವಡಕ್ ನೋಕಿಯಂತ್ರಂ, ಕದ ಪರೆಯುಂಬೋಲ್ ಮೊದಲಾದವುಗಳು ಶ್ರೀನಿವಾಸನ್ ಅವರ ಜನಪ್ರಿಯ ಸಿನಿಮಾಗಳು. ಕೇರಳದ ಪ್ರಸಿದ್ಧ ನಿರ್ದೇಶಕರಾದ ಪ್ರಿಯದರ್ಶನ್ ಹಾಗೂ ಸತ್ಯನ್ ಅಂದಿಕ್ಕಾಡ್ ಅವರ ಹಲವು ಸಿನಿಮಾಗಳಲ್ಲಿ ಚಿತ್ರಕಥೆ ಬರೆದು ನಟಿಸಿದ್ದಾರೆ.

ಶ್ರೀನಿವಾಸನ್ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ ಮೊದಲಾದ ಉನ್ನತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಶ್ರೀನಿವಾಸನ್ ಪತ್ನಿ ವಿಮಲಾ, ಮಕ್ಕಳಾದ ವಿನೀತ್ ಶ್ರೀನಿವಾಸನ್ ಹಾಗೂ ಧ್ಯಾನ್ ಶ್ರೀನಿವಾಸನ್ ಅವರನ್ನು ಅಗಲಿದ್ದಾರೆ.

Advertisement

LEAVE A REPLY

Please enter your comment!
Please enter your name here