
ಬಳ್ಳಾರಿ, ಡಿ.18: ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಸಭಾಂಗಣಕ್ಕೆ ಪ್ರೋ. ಸಿದ್ದು ಹಲಗೂರು ಸಭಾಂಗಣ ಎಂದು ಹೆಸರಿಡಲಾಗಿದ್ದು, ಕನ್ನಡ ಪರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ. ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಲ್ಲದೆ, ಬಳ್ಳಾರಿಗೆ ಸಿದ್ದು ಹಲಗೂರು ಅವರ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ.
ಸಮಾಜದಲ್ಲಿ ಹೇಳುವವರು – ಕೇಳುವವರು ಇಲ್ಲದೆ ಇದ್ದಾಗ ಇಂತಹ ಸರ್ವಾಧಿಕಾರಿ ಧೋರಣೆಗಳು ಸರ್ವೇಸಾಮಾನ್ಯ. ವೈಯಕ್ತಿಕ ಪ್ರಚಾರಕರ ವ್ಯಕ್ತಿಗಳ ಹೆಸರನ್ನು ಹೀಗೆಯೇ ಸರ್ಕಾರಿ ಸಭಾಂಗಣಗಳಿಗೆ ಸಾರ್ವಜನಿಕರ ಆಸ್ತಿ ಪಾಸ್ತಿಗಳ ಹೆಸರುಗಳಿಗೆ, ನಾಮಕರಣ ಮಾಡುತ್ತಾರೆ. ಬಳ್ಳಾರಿ ಜಿಲ್ಲೆಯಲ್ಲಿ ಎಷ್ಟೋ ಇತಿಹಾಸ ಸೃಷ್ಟಿಸಿದ ಮಹನೀಯರು ಇದ್ದಾರೆ ಅಂತವರ ಹೆಸರುಗಳನ್ನು ಇಡಬೇಕೆಂಬುದು ನಮ್ಮ ಒತ್ತಾಯ ಎಂದು ಕನ್ನಡಪರ ಹೋರಟಗಾರರು ಹೇಳಿದ್ದಾರೆ.

ಕರ್ನಾಟಕ ಏಕೀಕರಣಕ್ಕಾಗಿ ಹುತಾತ್ಮರಾದ ಎಕೈಕ ಕನ್ನಡಿಗ ಹುತಾತ್ಮ ಪೈಲ್ವಾನ್ ರಂಜಾನ್ ಸಾಬ್ ಅವರ ಹೆಸರು ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯದಲ್ಲಿರುವ ಸಭಾಂಗಣಕ್ಕೆ ಸೂಕ್ತ ಅನ್ನವುದು ಕನ್ನಡಪರ ಹೋರಾಟಗಾರರ ಆಗ್ರಹವಾಗಿದೆ.
ಹುತಾತ್ಮ ಪೈಲ್ವಾನ್ ರಂಜಾನ್ ಸಾಬ್
ಬಳ್ಳಾರಿಯ ಪೈಲ್ವಾನ್ ರಂಜಾನ್ ಸಾಬ್ ಅವರು ಕರ್ನಾಟಕ ಏಕೀಕರಣ ಹೋರಾಟದ ವೇಳೆ ಪ್ರಾಣ ತ್ಯಾಗ ಮಾಡಿದ ಮಹನೀಯ ವ್ಯಕ್ತಿ. 1953ರಲ್ಲಿ ಬಳ್ಳಾರಿಯನ್ನು ಮೈಸೂರು ರಾಜ್ಯ (ಇಂದಿನ ಕರ್ನಾಟಕ)ಕ್ಕೆ ಸೇರಿಸುವ ಹೋರಾಟದಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಿದ್ದರು. ಏಕೀಕರಣ ಹೋರಾಟದ ಸಂದರ್ಭದಲ್ಲಿ, ಕಾರ್ಯಕ್ರಮದ ವೇಳೆ ನಡೆದ ಆಮ್ಲ ದಾಳಿಯಿಂದ ಗಂಭೀರ ಗಾಯಗೊಂಡು 1953 ಅಕ್ಟೋಬರ್ 2ರಂದು ಅವರು ಹುತಾತ್ಮರಾದರು. ಕರ್ನಾಟಕ ಏಕೀಕರಣ ಹೋರಾಟದ ಏಕೈಕ ಹುತಾತ್ಮ ಎಂದು ಅವರನ್ನು ಗೌರವದಿಂದ ಸ್ಮರಿಸಲಾಗುತ್ತದೆ.

ಹೀಗಾಗಿ ಬಳ್ಳಾರಿಗೆ ಯಾವುದೇ ಕೊಡುಗೆಯಿಲ್ಲದವರ ಹೆಸರನ್ನು ಸಭಾಂಗಣಕ್ಕೆ ಹಾಕಿರುವುದರ ಕುರಿತು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯ ಸಭಾಂಗಣಕ್ಕೆ ಪೈಲ್ವಾನ್ ರಂಜಾನ್ ಸಾಬ್ ಎಂದು ಹೆಸರಿಡಬೇಕಾಗಿ ಕನ್ನಡಪರ ಹೋರಾಟಗಾರರು ಆಗ್ರಹಿಸಿದ್ದಾರೆ.





