
ಬೆಂಗಳೂರು,ಜನವರಿ.20: ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ, ಯೋಜನೆ–ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಂಯುಕ್ತಾಶ್ರಯದಲ್ಲಿ “ಅಗತ್ಯ, ಪುರಾವೆ ಮತ್ತು ಫಲಿತಾಂಶ ಆಧಾರಿತ ನೀತಿ ಮತ್ತು ಯೋಜನೆ” ವಿಷಯದ ಕುರಿತು ಜನವರಿ 19ರ ಸೋಮವಾರ ನಗರದ ಗಾಂಧಿ ಭವನ, ಕುಮಾರ ಪಾರ್ಕ್ ಪೂರ್ವ, ಶೇಷಾದ್ರಿಪುರಂನಲ್ಲಿ ಒಂದು ದಿನದ ರಾಜ್ಯಮಟ್ಟದ ವಿಚಾರಗೋಷ್ಠಿ ನಡೆಯಿತು. ವಿಚಾರಗೋಷ್ಠಿಯನ್ನು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ.ಆರ್. ಪಾಟೀಲ್ ಅವರು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿ, ಅಭಿವೃದ್ಧಿಯ ಜೊತೆಗೆ ಪ್ರಕೃತಿ ಸಂರಕ್ಷಣೆಗೆ ಆದ್ಯತೆ ನೀಡಬೇಕೆಂಬ ಸಂದೇಶ ನೀಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, “ದಾಖಲೆಗಳ ಮಟ್ಟದಲ್ಲಿ ವಿಕೇಂದ್ರಿಕರಣ ನಡೆದಿದ್ದರೂ, ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ಯೋಜನೆಗಳ ಸಮೀಕರಣ ಸರಿಯಾಗಿ ಆಗುತ್ತಿಲ್ಲ. ಪ್ರಸ್ತುತ ಜಿಲ್ಲಾ ಪಂಚಾಯತ್ ಬಜೆಟ್‌ನ ಕೇವಲ 20% ಮಾತ್ರ ತಾಲೂಕು ಹಾಗೂ ಗ್ರಾಮ ಪಂಚಾಯತ್‌ಗಳಿಗೆ ಲಭ್ಯವಾಗುತ್ತಿದ್ದು, 80% ಉಳಿದ ಇಲಾಖೆಗೆ ಹಂಚಿಕೆ ಆಗುತ್ತಿದೆ. ಸ್ವಾತಂತ್ರ್ಯ ನಂತರ ನಮ್ಮ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿದ್ದರೆ, ಪ್ರತಿಯೊಬ್ಬ ನಾಗರಿಕನ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಒಂದು ಲಕ್ಷ ರೂ. ಇರಬೇಕಿತ್ತು. ಜನರಿಗೆ ಸಿಗಬೇಕಾದ ಸೌಲಭ್ಯಗಳು ಬೇರೆಡೆ ಹಂಚಿಹೋಗುತ್ತಿವೆ. ಫಲಿತಾಂಶ ಆಧಾರಿತ ಯೋಜನೆಗಳನ್ನು ತರಬೇಕು. ಕಾರ್ಯಾಂಗ ಹಾಗೂ ಶಾಸಕಾಂಗ ಕೈಜೋಡಿಸಿ ಯೋಜನೆಗಳನ್ನು ಫಲಪ್ರದಗೊಳಿಸಬೇಕಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದ ಪ್ರಸ್ತಾವಿಕ ಭಾಷಣದಲ್ಲಿ ಯೋಜನಾ ಇಲಾಖೆಯ ನಿರ್ದೇಶಕ ಬಸವರಾಜು ಮಾತನಾಡಿ, “ಗ್ರಾಮ, ತಾಲೂಕು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಹಂತದಲ್ಲಿ ಜನರಿಂದ ಬಂದ ಬೇಡಿಕೆಗಳು ಮತ್ತು ಆಶೋತ್ತರಗಳನ್ನು ರಾಜ್ಯಮಟ್ಟದ ನೀತಿ ಹಾಗೂ ಆಯವ್ಯಯದಲ್ಲಿ ಅಳವಡಿಸುವ ಉದ್ದೇಶದಿಂದ ಕಳೆದ ಮೂರು–ನಾಲ್ಕು ತಿಂಗಳುಗಳಿಂದ ಸತತ ಪ್ರಯತ್ನ ನಡೆಸಲಾಗುತ್ತಿದೆ. ಕೆಳಹಂತದ ಅಗತ್ಯತೆಗಳಿಗೆ ತಕ್ಕ ಪುರಾವೆಗಳ ಆಧಾರದಲ್ಲಿ ಯೋಜನೆ ರೂಪಿಸುವ ಕುರಿತು ಈ ವಿಚಾರಗೋಷ್ಠಿಯಲ್ಲಿ ಸಮಗ್ರ ಚರ್ಚೆ ನಡೆಯಲಿದೆ” ಎಂದು ಹೇಳಿದರು.

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಮಾತನಾಡಿ, ಯೋಜನಾ ಆಯೋಗದ ಇತಿಹಾಸವನ್ನು ಸ್ಮರಿಸುತ್ತಾ, “ಗಾಂಧೀಜಿಯ ಗ್ರಾಮ ಸ್ವರಾಜ್ಯದ ಕನಸನ್ನು ಸಾಕಾರಗೊಳಿಸುವ ಉದ್ದೇಶದಿಂದಲೇ ಯೋಜನಾ ಆಯೋಗ ಆರಂಭವಾಯಿತು. ಶಿಕ್ಷಣ, ಆರೋಗ್ಯ, ನೈರ್ಮಲ್ಯ, ನೀರು, ಪರಿಸರ, ಕೃಷಿ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕಾರ್ಮಿಕ ವಲಯಗಳನ್ನು ಕೇಂದ್ರಿಕೃತವಾಗಿ ವರದಿ ತಯಾರಿಸಿ ಈ ಬಜೆಟ್‌ನಲ್ಲಿ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಯೋಜನಾ ಆಯೋಗದ ಶಿಫಾರಸುಗಳನ್ನು ಆಯವ್ಯಯದಲ್ಲಿ ಅನುಷ್ಠಾನಗೊಳಿಸುವ ಭರವಸೆ ಲಭಿಸಿದೆ. ಮುಂದಿನ ದಿನಗಳಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲಾಗುವುದು” ಎಂದರು.
ವಿಶೇಷ ಅತಿಥಿಯಾಗಿ ಮಾತನಾಡಿದ ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ್, “ಜನರ ಬೇಡಿಕೆಗಳು ಕಾರ್ಯಕ್ರಮಗಳ ರೂಪದಲ್ಲಿ ಬಜೆಟ್‌ನಲ್ಲಿ ಪ್ರತಿಫಲನಗೊಂಡು, 2027–28ರ ಆಯವ್ಯಯದ ಮೂಲಕ ಜನರಿಗೆ ಸೂಕ್ತ ಪರಿಹಾರ ಸಿಗಬೇಕು. ಜನರ ಅವಶ್ಯಕತೆಗಳಿಗೆ ಅನುಕೂಲವಾಗುವಂತಹ ಜನಸ್ನೇಹಿ ಬಜೆಟ್ ಮಂಡನೆಯಾಗಬೇಕು” ಎಂದು ಅಭಿಪ್ರಾಯಪಟ್ಟರು.
ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ ಗಣ್ಯ ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿ ಧನ್ಯವಾದಗಳನ್ನು ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಪ್ರೊ. ರಾಜೀವ್ ಗೌಡ ಮಾಜಿ ರಾಜ್ಯ ಸಭಾ ಸದಸ್ಯರು ಹಾಗೂ ಮಾಜಿ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ, ಕರ್ನಾಟಕ ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಡಾ. ನಾರಾಯಣ ಸ್ವಾಮಿ,ಭಾರತೀಯ ಆಡಳಿತ ಸೇವೆಯ ಅಧಿಕಾರಿ ಮನೋಜ್ ಜೈನ್, ಯೋಜನೆ ಮತ್ತು ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆಯ ಕಾರ್ಯದರ್ಶಿಗಳು, ರಮಣದೀಪ್ ಚೌಧರಿ ಸರ್ಕಾರದ ಕಾರ್ಯದರ್ಶಿಗಳು- 1 ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ನಂತರ ಆಯವ್ಯಯದ ಆದ್ಯತೆ ಮತ್ತು ಅಭಿವೃದ್ಧಿ ಹಾಗೂ ವಿಕೇಂದ್ರಿಕೃತ ಯೋಜನೆ, ಅಧಿಕಾರಗಳು, ಹಣಕಾಸು ಮತ್ತು ಕೆಳಹಂತಗಳ ಬಲವರ್ಧನೆ- ಈ ವಿಷಯವಾಗಿ ವಿಚಾರಗೋಷ್ಠಿಗಳು ನಡೆದವು.





