ಸಮಾಜಮುಖಿ ಸೇವೆಗೆ ಸಂದ ಗೌರವ: ‘ಹಂಸ ಸಮ್ಮಾನ್–2026’; ವಂದೇ ಭಾರತಂ ಫೌಂಡೇಶನ್ ಕಾರ್ಯಗಳ ಹಿನ್ನೋಟ

0
35
Advertisement

ಸಮಾಜಮುಖಿ ಕಾರ್ಯಗಳು, ರೈತರ ಕಲ್ಯಾಣ, ಪರಿಸರ ಸಂರಕ್ಷಣೆ ಹಾಗೂ ನಾಗರಿಕ ಸಹಭಾಗಿತ್ವದ ಮೂಲಕ ಜನಜೀವನದಲ್ಲಿ ತಮ್ಮದೇ ಛಾಪು ಮೂಡಿಸಿರುವ ವಂದೇ ಭಾರತಂ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷರಾದ ಬಿಜ್ಜವರ ಎಚ್. ಲೋಕೇಶ್ ಅವರಿಗೆ ಪ್ರತಿಷ್ಠಿತ ‘ಹಂಸ ಸಮ್ಮಾನ್–2026’ ಪ್ರಶಸ್ತಿ ಲಭಿಸಿದೆ. ಹಂಸಜ್ಯೋತಿ ಟ್ರಸ್ಟ್ (ರಿ) ವತಿಯಿಂದ ನಡೆದ ಸುವರ್ಣ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಈ ಗೌರವ ಪ್ರದಾನಗೊಂಡಿದೆ. ಈ ಪ್ರಶಸ್ತಿ ಲಭಿಸಿದ ಸಂದರ್ಭದಲ್ಲಿ, ಲೋಕೇಶ್ ಅವರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಡೆಸಿರುವ ಕಾರ್ಯಗಳನ್ನು ಮೆಲುಕು ಹಾಕುವುದು ಸೂಕ್ತವಾಗಿದೆ.

ಜನ ಶಾಸನ:ಸೂಕ್ಷ್ಮ ಆಡಳಿತಕ್ಕೆ ನಾಗರಿಕರ ಸಹಭಾಗಿತ್ವ

ವಂದೇ ಭಾರತಂ ಫೌಂಡೇಶನ್ ಮೂಲಕ ಲೋಕೇಶ್ ಹಲವು ವರ್ಷಗಳಿಂದ ಸಾರ್ವಜನಿಕ ಹಿತದಾಯಕ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುತ್ತಿದ್ದಾರೆ. ನಗರ ಆಡಳಿತದಲ್ಲಿ ನಾಗರಿಕರ ನೇರ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ‘ಪ್ರಜಾಡಳಿತ – ಜನ ಶಾಸನ’ ಎಂಬ ಕಾರ್ಯಕ್ರಮವನ್ನು ವಂದೇ ಭಾರತಂ ಫೌಂಡೇಶನ್ ರೂಪಿಸಿತ್ತು. ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ 198 ವಾರ್ಡ್‌ಗಳ ನಾಗರಿಕರು ಮತ್ತು ವಿವಿಧ ಕ್ಷೇತ್ರಗಳ ಹಿತಾಸಕ್ತಿದಾರರನ್ನು ಒಳಗೊಂಡಂತೆ ಈ ಯೋಜನೆ ರೂಪುಗೊಂಡಿದ್ದು, ಸೂಕ್ಷ್ಮ ಮಟ್ಟದಲ್ಲಿ ಆಡಳಿತ ವ್ಯವಸ್ಥೆಯೊಂದಿಗೆ ಸಹಯೋಗ ಬೆಳೆಸಿ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶ ಮತ್ತು ನಾಗರಿಕರ ನೇರ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸಲಾಗಿತ್ತು.

ಈ ಕಾರ್ಯಕ್ರಮದ ಭಾಗವಾಗಿ ವಿವಿಧ ಕ್ಷೇತ್ರಗಳಿಂದ ಸೇವಾಭಾವನೆಯುಳ್ಳ ಸ್ವಯಂಸೇವಕರನ್ನು ಗುರುತಿಸಿ ಅವರಿಗೆ ತರಬೇತಿ ನೀಡಿ ನೋಂದಾಯಿಸುವ ಕಾರ್ಯ ಆರಂಭಿಸಲಾಯಿತು. ಸುಮಾರು 800ಕ್ಕೂ ಹೆಚ್ಚು ಸ್ವಯಂಸೇವಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದು, ನಗರ ಸಮಸ್ಯೆಗಳ ಪರಿಹಾರಕ್ಕೆ ನಾಗರಿಕರ ಸಹಭಾಗಿತ್ವವನ್ನು ಬಲಪಡಿಸುವ ಅಭೂತಪೂರ್ವ ಪ್ರಯತ್ನ ಇದಾಗಿತ್ತು.

ಅಗ್ನಿಅವಘಡ ಮತ್ತು ವಿಪತ್ತು ನಿರ್ವಹಣಾ ಜಾಗೃತಿ

ಜನರಲ್ಲಿ ಅಗ್ನಿ ಅವಘಡಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ವಂದೇ ಭಾರತಂ ಫೌಂಡೇಶನ್ ವತಿಯಿಂದ ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣಾ ಜಾಗೃತಿ ಕಾರ್ಯಕ್ರಮ ಕೂಡ ಆಯೋಜಿಸಲಾಯಿತು. ಬೆಂಗಳೂರು ನಗರದ ಹೋಟೆಲ್ ಆಟ್ರಿಯಾದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ವಿಶ್ವದ ಪ್ರಮುಖ ಅಗ್ನಿಶಾಮಕ ಸಂಸ್ಥೆಯಾದ ರೋಷನ್ ಬೋರ್ಡ್ ಸಹ ಸಹಭಾಗಿತ್ವ ನೀಡಿತ್ತು. ಅಗ್ನಿ ಅವಘಡಗಳ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ತುರ್ತು ಸೇವೆಗಳ ಮಹತ್ವವನ್ನು ಜನರಿಗೆ ತಿಳಿಸುವ ಪ್ರಯತ್ನ ಈ ಕಾರ್ಯಕ್ರಮದ ಮೂಲಕ ನಡೆಯಿತು.

ಫ್ರೀಡಮ್ ಫೆಸ್ಟ್‌

ದೇಶಭಕ್ತಿಯನ್ನು ಉತ್ತೇಜಿಸುವ ಉದ್ದೇಶದಿಂದ 2011ರಲ್ಲಿ ಬೆಂಗಳೂರು ಫ್ರೀಡಮ್ ಪಾರ್ಕ್‌ನಲ್ಲಿ‘ಫ್ರೀಡಮ್ ಫೆಸ್ಟ್’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಯಿತು. “ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ” ಎಂಬ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮವು ಜನರ ಗಮನ ಸೆಳೆಯಿತು. ಕಾರ್ಯಕ್ರಮ ನಡೆದಷ್ಟೂ ಸಮಯ ಕರ್ನಾಟಕದ ಮುಖ್ಯಮಂತ್ರಿ ಸದಾನಂದ ಗೌಡರು ಪ್ರೇಕ್ಷಕರ ಆಸನದಲ್ಲೇ ಸಾಮಾನ್ಯ ಪ್ಲಾಸ್ಟಿಕ್ ಕುರ್ಚಿಯಲ್ಲಿ ಕುಳಿತುಕೊಂಡರು. ಇದರಿಂದ ಅವರು ಸರಳತೆ ಮತ್ತು ಸಮಾನತೆಯ ಉದಾಹರಣೆ ನೀಡಿದರು. ಇಲ್ಲಿ ವ್ಯಕ್ತಿಗಳಿಗಿಂತ ದೇಶ ಮತ್ತು ರಾಷ್ಟ್ರಧ್ವಜಕ್ಕೇ ಮೊದಲ ಆದ್ಯತೆ ನೀಡಲಾಗಿತ್ತು. ವೇದಿಕೆಯಲ್ಲಿ ಕಲಾವಿದರು ಮಾತ್ರ ಪ್ರದರ್ಶನ ನೀಡಿ, ಭಾರತದ ಸುಂದರ ಸಾಂಸ್ಕೃತಿಕ ಪರಂಪರೆಯನ್ನು ಜನರಿಗೆ ಪರಿಚಯಿಸಿದರು. ದೇಶ ಮತ್ತು ರಾಷ್ಟ್ರಧ್ವಜಕ್ಕೆ ಪ್ರಾಮುಖ್ಯತೆ ನೀಡಿದ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.

ನೀರು – ಭವಿಷ್ಯದ ಹಾದಿ:ನೀರಿನ ಸಂರಕ್ಷಣೆಗೆ  ಜನಜಾಗೃತಿ ಕಾರ್ಯಕ್ರಮ

ನೀರಿನ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ 2016ರಲ್ಲಿ ‘ನೀರು – ಭವಿಷ್ಯದ ಹಾದಿ’ ಎಂಬ ಸಮ್ಮೇಳನವನ್ನು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಜೆ.ಎನ್. ಟಾಟಾ ಸಭಾಂಗಣದಲ್ಲಿ ಆಯೋಜಿಸಲಾಯಿತು. ಕಾವೇರಿ ನದಿ ನೀರಿನ ಸಮಸ್ಯೆ, ಕೃಷಿ ಪದ್ಧತಿ, ಹವಾಮಾನ ಬದಲಾವಣೆ ಮತ್ತು ನೀರಿನ ಸಮರ್ಪಕ ಬಳಕೆ ಕುರಿತಂತೆ ವಿವಿಧ ಕ್ಷೇತ್ರಗಳ ತಜ್ಞರು ಈ ಸಮ್ಮೇಳನದಲ್ಲಿ ಚರ್ಚೆ ನಡೆಸಿದರು. ದಿನಪೂರ್ತಿ ನಡೆದ ಈ ಸಮ್ಮೇಳನದಲ್ಲಿ ಒಟ್ಟು 11 ಅಧಿವೇಶನಗಳು ನಡೆದವು. ಕೃಷಿ ನೀತಿಗಳನ್ನು ಹೇಗೆ ನಿರ್ವಹಿಸಬೇಕು, ಮಣ್ಣನ್ನು ಹೇಗೆ ಕಾಪಾಡಬೇಕು, ಹವಾಮಾನ ಬದಲಾವಣೆ ಬಗ್ಗೆ ರೈತರ ಅಭಿಪ್ರಾಯಗಳು ಹೇಗಿವೆ ಎಂಬ ವಿಷಯಗಳನ್ನು ರೈತರ ಹಿತದೃಷ್ಟಿಯಿಂದ ಚರ್ಚಿಸಲಾಯಿತು. ಐಐಎಸ್‌ಸಿ, ಜಿಕೆವಿಕೆ, ಯುಎಎಸ್, ಇಸ್ರೋ, ಐಸೆಕ್ ಮುಂತಾದ ಪ್ರಸಿದ್ಧ ಸಂಸ್ಥೆಗಳ ತಜ್ಞರು ಮಾತನಾಡಿದರು. ನೀರಿನ ಬಳಕೆಯನ್ನು ಸಮರ್ಪಕವಾಗಿ ನಿರ್ವಹಿಸುವ ಅಗತ್ಯವನ್ನು ಈ ಸಮ್ಮೇಳನವು ಸ್ಪಷ್ಟಪಡಿಸಿತು.

ಪ್ರವಾಹ ಪೀಡಿತರಿಗೆ ವಂದೇ ಭಾರತಂ ನೆರವು

ಪ್ರಾಕೃತಿಕ ವಿಪತ್ತುಗಳ ಸಂದರ್ಭದಲ್ಲೂ ವಂದೇ ಭಾರತಂ ಫೌಂಡೇಶನ್ ಮಾನವೀಯ ಸೇವೆಯನ್ನು ಸಲ್ಲಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತರಿಗೆ ಸುಮಾರು ರೂ.45 ಲಕ್ಷ ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ಮೂರು ಲಾರಿಗಳ ಮೂಲಕ ವಿತರಿಸಲಾಗಿದೆ. ಶ್ರೀ ಪ್ರತ್ಯಂಗಿರಾ ದೇವಿ ದೇವಸ್ಥಾನ ಟ್ರಸ್ಟ್ ಸಹಯೋಗದಲ್ಲಿ ನಡೆದ ಈ ಪ್ರವಾಹ ಪರಿಹಾರ ಕಾರ್ಯಕ್ಕೆ ಜನರಿಂದ ಬಂದ ಉತ್ತಮ ಬೆಂಬಲ ದೊರಕಿತು. ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕುಗಳ ಬಾಧಿತ ಕುಟುಂಬಗಳಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ತಲುಪಿಸುವ ಕಾರ್ಯವನ್ನು ಸ್ವಯಂಸೇವಕರು ನೇರವಾಗಿ ನಡೆಸಿದ್ದರು. ಇದೇ ರೀತಿಯ ನೆರವನ್ನು ಉತ್ತರ ಕರ್ನಾಟಕದ ಗದಗ ಮತ್ತು ಮುಧೋಳ ಪ್ರದೇಶಗಳ ಪುನರ್ವಸತಿ ಕೇಂದ್ರಗಳಿಗೂ ನೀಡಲಾಗಿದೆ.

ಲಾಕ್‌ಡೌನ್‌ನಲ್ಲಿ ವಾರ್ ರೂಂ

ಕೊವಿಡ್–19 ಮಹಾಮಾರಿ ಮತ್ತು ಲಾಕ್‌ಡೌನ್ ಅವಧಿಯಲ್ಲಿ ರೈತರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ವಂದೇ ಭಾರತಂ ಫೌಂಡೇಶನ್ ತೋಟಗಾರಿಕೆ ಇಲಾಖೆ ಮತ್ತು ಹೋಪ್ಕಾಮ್ಸ್ ಸಹಯೋಗದಲ್ಲಿ ವಿಶೇಷ ವಾರ್ ರೂಂ ಕಾಲ್ ಸೆಂಟರ್ ಆರಂಭಿಸಿತು. ಈ ಉಪಕ್ರಮದ ಮೂಲಕ ಸುಮಾರು 500ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳೊಂದಿಗೆ ಸಂಪರ್ಕ ಸಾಧಿಸಿ 5000 ಟನ್‌ಗಿಂತ ಹೆಚ್ಚು ಹಣ್ಣು–ತರಕಾರಿಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲಾಯಿತು. ಇದರ ಪರಿಣಾಮವಾಗಿ 500ಕ್ಕೂ ಹೆಚ್ಚು ರೈತರು ನೇರವಾಗಿ ಲಾಭ ಪಡೆದರು.

ಲಾಕ್‌ ಡೌನ ಸಂಕಷ್ಟ; ವಂದೇ ಭಾರತಂ ವತಿಯಿಂದ ಫ್ರುಟ್‌ ಮೇಳ

ಲಾಕ್‌ಡೌನ್ ಸಮಯದಲ್ಲಿ ರೈತರಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಫ್ರೂಟ್ ಮೇಳ ಆಯೋಜಿಸಿ ಬನವಾಸಿ, ಸಿರ್ಸಿ, ಶಿವಮೊಗ್ಗ ಸೇರಿದಂತೆ ವಿವಿಧ ಪ್ರದೇಶಗಳಿಂದ ತರಲಾದ ಅನಾನಸ್ ಹಾಗೂ ಇತರೆ ಹಣ್ಣು–ತರಕಾರಿಗಳನ್ನು ನಗರದಲ್ಲಿ ನೇರವಾಗಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಯಿತು. ಇದರಿಂದ ಸಂಕಷ್ಟದ ಸಮಯದಲ್ಲಿ ರೈತರಿಗೆ ಆರ್ಥಿಕ ಆಸರೆ ದೊರಕಿತು. “ಒಂದು ಹೊತ್ತಿಗೆ ಅನ್ನ–ರೊಟ್ಟಿ–ದಾಲ್, ಹೊಟ್ಟೆ ತುಂಬ ಹಣ್ಣು ಮತ್ತು ಸೊಪ್ಪು” ಎಂಬ ಘೋಷವಾಕ್ಯವನ್ನು ರೂಪಿಸಿಕೊಂಡ ವಂದೇ ಭಾರತಂ, ಇದನ್ನು ಕಾರ್ಯರೂಪಕ್ಕೆ ತರಲು ಸರ್ಕಾರದೊಂದಿಗೆ ಸಂವಾದ ನಡೆಸಿತು. ಇದರ ಭಾಗವಾಗಿ ಬನವಾಸಿ, ಸಿರ್ಸಿ, ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೈತರು ಬೆಳೆದ ಅನಾನಸ್ ಸೇರಿದಂತೆ ದೊಡ್ಡ ಪ್ರಮಾಣದ ಹಣ್ಣು ಮತ್ತು ತರಕಾರಿಗಳನ್ನು ಸಂಗ್ರಹಿಸಲಾಯಿತು. ಟನ್‌ಗಟ್ಟಲೆ ಅನಾನಸ್ ಮತ್ತು ಇತರೆ ಹಣ್ಣು–ತರಕಾರಿಗಳನ್ನು ತುಂಬಿಕೊಂಡ ಲಾರಿಗಳು ಲಾಲ್‌ಬಾಗ್‌ಗೆ ತಲುಪಿದ್ದು, ಇದು ದೊಡ್ಡ ಮಟ್ಟದ ಯೋಜನೆಯಾಗಿ ರೂಪುಗೊಂಡಿತು. ಈ ಉಪಕ್ರಮದಿಂದ ಕೊವಿಡ್ ಸಂಕಷ್ಟದ ಸಮಯದಲ್ಲಿ ರೈತರಿಗೆ ಅಗತ್ಯ ನೆರವು ದೊರಕಿದ್ದು, ಕೃಷಿ ಕ್ಷೇತ್ರಕ್ಕೆ ತಾತ್ಕಾಲಿಕವಾದರೂ ದೊಡ್ಡ ಆಸರೆಯಾಯಿತು.

ಸೇವಾಗ್ರಹ

ಸರ್ಕಾರದ ವಿವಿಧ ಯೋಜನೆಗಳು ನಿಜವಾದ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂಬ ಉದ್ದೇಶದಿಂದ ‘ಸೇವಾಗ್ರಹ’ (SEVAGRAHA) ಎಂಬ ಸೇವಾ ವೇದಿಕೆಯನ್ನು ಕೂಡ ವಂದೇ ಭಾರತಂ ಫೌಂಡೇಶನ್‌ ಆರಂಭಿಸಿದೆ. ಇದರ ಮೂಲಕ ಕರ್ನಾಟಕದ ಜನರು ಎದುರಿಸುವ ವಿವಿಧ ಸಮಸ್ಯೆಗಳು ಮತ್ತು ಅಹವಾಲುಗಳಿಗೆ ಸಹಾಯ ಮಾಡುವ ಕೆಲಸ ಮಾಡಲಾಗುತ್ತದೆ. ಮಾನ್ಯ ದಾಖಲೆಗಳು ಇರುವ ನಿಜವಾದ ಜನರಿಗೆ ಸರ್ಕಾರದ ಕಚೇರಿಗಳಲ್ಲಿ ಕೆಲಸ ಆಗುವಂತೆ ನೆರವು ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಅಂದರೆ, ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಫೌಂಡೇಶನ್ ಕಾರ್ಯನಿರ್ವಹಿಸುತ್ತದೆ. ಹಲವಾರು ಜನರಿಗೆ ದಾಖಲೆಗಳನ್ನು ಸಿದ್ಧಪಡಿಸುವುದು ಮತ್ತು ಕಾನೂನು ಕ್ರಮಗಳನ್ನು ತಿಳಿದುಕೊಳ್ಳುವುದು ಕಷ್ಟವಾಗುತ್ತದೆ. ಕೆಲವೊಮ್ಮೆ ಮಧ್ಯವರ್ತಿಗಳು ಹಣ ಪಡೆದು ಕೆಲಸ ಮಾಡದೇ ಜನರನ್ನು ಕಿರುಕುಳ ನೀಡುವ ಸಂದರ್ಭಗಳೂ ಇವೆ. ಇಂತಹ ಸಮಸ್ಯೆಗಳನ್ನು ತಪ್ಪಿಸಲು ಈ ಸೇವೆ ಸಹಾಯಕವಾಗಲಿದೆ.

ಇಂತಹ ಹಲವಾರು ಸಮಾಜಮುಖಿ ಕೆಲಸ-ಕಾರ್ಯಗಳಲ್ಲಿ ವಂದೇ ಭಾರತಂ ಫೌಂಡೇಶನ್ ಸಮಾಜದಲ್ಲಿ ಈಗಾಗಲೇ ವಿಶಿಷ್ಟ ಛಾಪನ್ನು ಮೂಡಿಸಿದೆ. ರೈತರ ಕಲ್ಯಾಣ, ನೀರಿನ ಸಂರಕ್ಷಣೆ, ನಾಗರಿಕ ಸಹಭಾಗಿತ್ವ ಮತ್ತು ಮಾನವೀಯ ಸೇವೆಗಳ ಮೂಲಕ ಸಾಮಾಜಿಕ ಕಾರ್ಯಗಳನ್ನು ಬದ್ಧತೆಯಲ್ಲಿ ಮಾಡುತ್ತಿರುವ ಬಿಜ್ಜವರ ಎಚ್. ಲೋಕೇಶ್ ಅವರಿಗೆ ಅರ್ಹವಾಗಿಯೇ ‘ಹಂಸ ಸಮ್ಮಾನ್–2026’ ಪ್ರಶಸ್ತಿ ದೊರೆತಿದೆ. ಈ ಗೌರವವು ಸಮಾಜ ಸೇವೆಯ ಮಾರ್ಗದಲ್ಲಿ ಮತ್ತಷ್ಟು ಮುಂದುವರೆಯಲು ಪ್ರೇರಣೆಯನ್ನು ನೀಡಿದಂತಾಗಿದೆ.

Advertisement

LEAVE A REPLY

Please enter your comment!
Please enter your name here