ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ–ಉಪನ್ಯಾಸ ಕಾರ್ಯಕ್ರಮ

0
20
Advertisement

ಚಿತ್ರದುರ್ಗ,ಮಾ.17: ಕರ್ನಾಟಕ ಲೇಖಕಿಯರ ಸಂಘದ ಚಿತ್ರದುರ್ಗ ಜಿಲ್ಲಾ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನಗರದ ಪತ್ರಕರ್ತರ ಭವನದ ಅಂಬೇಡ್ಕರ್ ಸಭಾಂಗಣದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜೆ. ಕರಿಯಪ್ಪ ಮಾಳಗಿ ಮಾತನಾಡಿ, 21ನೇ ಶತಮಾನದಲ್ಲಿ ಮಹಿಳೆಯರು ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿಕೊಂಡಿದ್ದಾರೆ ಎಂದು ಹೇಳಿದರು. “ಇಂದಿನ ಮಹಿಳೆಯರು ಹಳೆಯ ವಿಚಾರಗಳಲ್ಲೇ ಸೀಮಿತವಾಗಿರದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ತಮ್ಮ ಅಸ್ತಿತ್ವವನ್ನು ಸ್ಪಷ್ಟಪಡಿಸಿದ್ದಾರೆ. ಮಹಿಳೆಯರಿಗಾಗಿ ಗರತಿ ಹಾಡುಗಳಿರುವುದೇ ಹೊರತು ಪುರುಷರಿಗಾಗಿ ಇಲ್ಲ. ಇಂತಹ ಕಾರ್ಯಕ್ರಮಗಳು ಸಮಾಜದ ಬಹುತ್ವವನ್ನು ಪ್ರತಿಪಾದಿಸುತ್ತವೆ. ರಾಜ್ಯದ ಮೂಲೆಮೂಲೆಗಳಿಂದ ಬಂದಿರುವ ನೀವು ಇದಕ್ಕೆ ಸಾಕ್ಷಿಯಾಗಿದ್ದೀರಿ,” ಎಂದರು.

ಖ್ಯಾತ ವಿಮರ್ಶಕಿ ಹಾಗೂ ಕವಯತ್ರಿ ತಾರಿಣಿ ಶುಭದಾಯಿನಿ ಉಪನ್ಯಾಸ ನೀಡುತ್ತಾ, ಅನಾದಿ ಕಾಲದಿಂದ ಮಹಿಳೆ ಶೋಷಣೆಯನ್ನು ಅನುಭವಿಸುತ್ತಾ ಬಂದಿದ್ದಾಳೆ ಎಂದು ಅಭಿಪ್ರಾಯಪಟ್ಟರು. “ಮಹಿಳೆಯ ಭಾವನೆಗಳನ್ನು ವ್ಯಕ್ತಪಡಿಸಲು ಹಲವೇಳೆ ಪುರುಷನ ಒಪ್ಪಿಗೆಯೇ ಅಗತ್ಯವಾಗುತ್ತದೆ ಎಂಬ ಸ್ಥಿತಿ ಇಂದಿಗೂ ಕೆಲವಡೆ ಮುಂದುವರಿದಿದೆ. ಹೆಳವನಕಟ್ಟೆ ಗಿರಿಯಮ್ಮ ರಚಿಸಿದ ಸೀತಾ ಪಾತ್ರದ ಉದಾಹರಣೆಯ ಮೂಲಕ ಆ ಸನ್ನಿವೇಶವನ್ನು ಕಾಣಬಹುದು. ವಿಭಿನ್ನ ರೀತಿಯಲ್ಲಿ ಆಲೋಚಿಸುವ ಶಕ್ತಿ ಮಹಿಳೆಗೆ ಇದೆ. ಆದರೆ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿಯ ಕೊರತೆ ಸಮಾಜದಲ್ಲಿ ಕಾಣಿಸುತ್ತದೆ. ಸೃಜನಶೀಲತೆ ಯಾರೊಬ್ಬರ ಸ್ವತ್ತಲ್ಲ; ಮಹಿಳೆ–ಪುರುಷ ಇಬ್ಬರೂ ಸಮಾನರು. ಪ್ರತಿಭಾವಂತ ಮಹಿಳೆಯರು ಸವಾಲುಗಳನ್ನು ಎದುರಿಸುತ್ತಲೇ ಯಶಸ್ಸನ್ನು ಸಾಧಿಸಬೇಕು,” ಎಂದು ಹೇಳಿದರು.

ಕವಿಗೋಷ್ಠಿಗೆ ಅಧ್ಯಕ್ಷತೆ ವಹಿಸಿದ್ದ ಕವಿ ಹಾಗೂ ಚಿತ್ರಕಲಾವಿದ ಜಭಿವುಲ್ಲಾ ಎಂ. ಅಸದ್ ಮಾತನಾಡಿ, “ಕವಿಯಿಂದ ಕವಿತೆ ಗುರುತಿಸಿಕೊಳ್ಳುವುದಲ್ಲ; ಕವಿತೆಯಿಂದಲೇ ಕವಿ ಗುರುತಿಸಿಕೊಳ್ಳಬೇಕು,” ಎಂದು ಹೇಳಿದರು. ಕವಿತೆ ವಾಚಿಸುವಾಗ ರಂಗಭೂಮಿ ಕಲಾವಿದರಂತೆ ಹಾವಭಾವಗಳ ಮೂಲಕ ಕವಿತೆಯ ಆಶಯಕ್ಕೆ ಜೀವ ತುಂಬಬೇಕು ಎಂದು ತಿಳಿಸಿದರು. ವಾಚಿಸಲಾದ ಕವಿತೆಗಳು ಮಹಿಳೆಯರ ಅಂತರಂಗದ ಶಕ್ತಿ ಹಾಗೂ ನೋವನ್ನು ಪ್ರತಿಧ್ವನಿಸಿವೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಲೇಖಕಿಯರ ಸಂಘದ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷೆ ನಿರ್ಮಲ ಮರಡಿಹಳ್ಳಿ, ಮಹಿಳಾ ಸಾಹಿತ್ಯವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸಂಘ ಕಾರ್ಯನಿರ್ವಹಿಸುತ್ತಿದ್ದು, ಅದರ ಎಲ್ಲ ಚಟುವಟಿಕೆಗಳೂ ಮಹಿಳೆಯರನ್ನು ಸಾಂಸ್ಕೃತಿಕವಾಗಿ ಗಟ್ಟಿಗೊಳಿಸುವ ಗುರಿಯನ್ನು ಹೊಂದಿವೆ ಎಂದು ಹೇಳಿದರು.

ಉಪಾಧ್ಯಕ್ಷೆ ಡಿ. ಶಬ್ರಿನಾ ಮಹಮದ್ ಅಲಿ ಮಾತನಾಡಿ, “ಮಹಿಳೆಯರಿಂದ ಮಹಿಳೆಯರಿಗಾಗಿ ಮಹಿಳೆಯರಿಗೋಸ್ಕರ ಕಾರ್ಯನಿರ್ವಹಿಸುವ ಈ ಸಂಘದ ಚಿತ್ರದುರ್ಗ ಜಿಲ್ಲಾ ಘಟಕ ಪುನರುಜ್ಜೀವನಗೊಂಡ ರೀತಿಯನ್ನು ವಿವರಿಸಿದರು. ಸತತ ಎರಡು ವರ್ಷಗಳ ಸಂಘಟನೆಯ ನಂತರ ಇಂದು ಅಧಿಕೃತವಾಗಿ ಕಾರ್ಯಕ್ರಮ ಆಯೋಜಿಸಿರುವುದು ಅತ್ಯಂತ ಸಂತಸದ ಸಂಗತಿ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ದೀಪಿಕಾ ಬಾಬು, ಸಹಕಾರ್ಯದರ್ಶಿ ಚಾಂದನಿ, ಖಜಾಂಚಿ ಮೀರಾ ನಾಡಿಗ್, ಕಾರ್ಯಕಾರಿ ಸಮಿತಿ ಸದಸ್ಯರಾದ ವಿಜಯಲಕ್ಷ್ಮಿ, ಶಾಂತ, ಶಶಿಕಲಾ ಹಾಗೂ ಸಲಹಾ ಸಮಿತಿ ಸದಸ್ಯರಾದ ಗೀತಾ ನಾಗರಾಜ್, ದ್ಯಾಮಕ್ಕ ಮತ್ತು ರೇಣುಕಾ ಪ್ರಕಾಶ್ ಉಪಸ್ಥಿತರಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಒಟ್ಟು 63 ಕವಯತ್ರಿಯರು ಕವಿಗೋಷ್ಠಿಯಲ್ಲಿ ಭಾಗವಹಿಸಿದರು.

ಕಾರ್ಯಕ್ರಮವನ್ನು ವಿಜಯಲಕ್ಷ್ಮಿ ಮತ್ತು ಶಾಂತ ನಿರೂಪಿಸಿದರು. ಕೆ.ಸಿ. ಶಿಲ್ಪ ಜಗದೀಶ್ ಪ್ರಾರ್ಥನೆ ಸಲ್ಲಿಸಿದರು. ಮೀರಾ ನಾಡಿಗ್ ವಂದನಾರ್ಪಣೆ ನೆರವೇರಿಸಿದರು.

Advertisement

LEAVE A REPLY

Please enter your comment!
Please enter your name here