
ನವದೆಹಲಿ, ಫೆ.04: ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ಮಹಾತ್ಮ ಗಾಂಧಿಯವರ ಕಂಚಿನ ಪ್ರತಿಮೆಯನ್ನು ಕಳವು ಮಾಡಿರುವ ಘಟನೆಗೆ ಭಾರತ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಈ ಕುರಿತು ಆಸ್ಟ್ರೇಲಿಯಾ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ವಿಷಯವನ್ನು ಬಲವಾಗಿ ಪ್ರಸ್ತಾಪಿಸಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಮೆಲ್ಬೋರ್ನ್‌ನ ರೌವಿಲ್ಲಾದಲ್ಲಿರುವ ಆಸ್ಟ್ರೇಲಿಯನ್ ಇಂಡಿಯನ್ ಕಮ್ಯುನಿಟಿ ಸೆಂಟರ್ ಆವರಣದಲ್ಲಿ ಸ್ಥಾಪಿಸಲಾಗಿದ್ದ ಮಹಾತ್ಮ ಗಾಂಧಿ ಅವರ ಕಂಚಿನ ಪ್ರತಿಮೆಯನ್ನು ಅಪರಿಚಿತರು ಧ್ವಂಸಗೊಳಿಸಿ ತೆಗೆದುಹಾಕಿರುವುದು ಅತೀವ ಖೇದಕರ ಎಂದು ಹೇಳಿದ್ದಾರೆ. ನಾಪತ್ತೆಯಾದ ಪ್ರತಿಮೆಯನ್ನು ತಕ್ಷಣ ಪತ್ತೆಹಚ್ಚಿ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಸ್ಟ್ರೇಲಿಯಾ ಅಧಿಕಾರಿಗಳಿಗೆ ಭಾರತ ಒತ್ತಾಯಿಸಿದೆ ಎಂದರು.

ಕಳ್ಳತನವಾಗಿರುವ ಈ ಪ್ರತಿಮೆಯನ್ನು ದೆಹಲಿಯ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್)ಯಿಂದ ಉಡುಗೊರೆಯಾಗಿ ನೀಡಲಾಗಿತ್ತು. ‘ಆಸ್ಟ್ರೇಲಿಯಾ ಟುಡೆ’ ವರದಿಯಂತೆ, ಸೋಮವಾರ ಮಧ್ಯರಾತ್ರಿ 12.50ರ ಸುಮಾರಿಗೆ ಈ ಕೃತ್ಯ ನಡೆದಿದೆ. ಪ್ರತಿಮೆಯನ್ನು ಅದರ ಅಡಿಪಾಯದಿಂದ ಬೇರ್ಪಡಿಸಲು ದುಷ್ಕರ್ಮಿಗಳು ಕೋನ ಗ್ರೈಂಡರ್ ಬಳಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ತನಿಖೆಯನ್ನು ವಿಕ್ಟೋರಿಯಾ ಪೊಲೀಸ್‌ನ ನಾಕ್ಸ್ ಅಪರಾಧ ತನಿಖಾ ಘಟಕ ಕೈಗೆತ್ತಿಕೊಂಡಿದೆ. ಕಂಚಿನ ಪ್ರತಿಮೆಯನ್ನು ಮಾರಾಟ ಮಾಡಲು ಯತ್ನಿಸುವ ಯಾವುದೇ ವ್ಯಕ್ತಿಗಳ ಕುರಿತು ಎಚ್ಚರಿಕೆಯಿಂದಿರಲು ಸ್ಕ್ರ್ಯಾಪ್ ಲೋಹದ ವ್ಯಾಪಾರಿಗಳಿಗೆ ಪೊಲೀಸರು ಸೂಚನೆ ನೀಡಿದ್ದಾರೆ. ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಈ ಹಿಂದೆಯೂ ಪ್ರತಿಮೆ ಇಂತಹ ಕೃತ್ಯಕ್ಕೆ ಗುರಿಯಾಗಿತ್ತು. 2021ರ ನವೆಂಬರ್‌ನಲ್ಲಿ ಉದ್ಘಾಟನೆಯಾದ ಕೇವಲ 24 ಗಂಟೆಗಳಲ್ಲೇ ಅಪರಿಚಿತರು ಪ್ರತಿಮೆಯನ್ನು ಧ್ವಂಸಗೊಳಿಸಿದ್ದರು. ಆಸ್ಟ್ರೇಲಿಯಾದಲ್ಲಿ ಭಾರತ ವಿರೋಧಿ ಮನೋಭಾವ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇಂತಹ ವಿಧ್ವಂಸಕ ಕೃತ್ಯಗಳು ಆತಂಕ ಮೂಡಿಸುತ್ತಿವೆ.





