ನಿರೂಪಣೆಯಿಂದ ಬೆಳ್ಳಿತೆರೆಗೆ: ತುಳು ಚಿತ್ರರಂಗಕ್ಕೆ ಜಯಪ್ರಕಾಶ್ ಶೆಟ್ಟಿ ಪ್ರವೇಶ

0
23
Advertisement

ಬೆಂಗಳೂರು, ಜ.06: ಖ್ಯಾತ ನಿರೂಪಕ ಹಾಗೂ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ತುಳು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ತುಳು ಚಿತ್ರರಂಗದ ಖ್ಯಾತ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಅವರ ಬಹುನಿರೀಕ್ಷಿತ ‘ಬನ’ ಸಿನಿಮಾದಲ್ಲಿ ಜಯಪ್ರಕಾಶ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಸುದ್ದಿ ಮಾಧ್ಯಮಗಳಲ್ಲಿ ನಿರೂಪಕರಾಗಿ ತಮ್ಮದೇ ಛಾಪು ಮೂಡಿಸಿದ್ದ ಅಪರ್ಣ, ಗೌರೀಶ್ ಅಕ್ಕಿ, ರೆಹಮಾನ್, ಜಾಹ್ನವಿ, ಶೀತಲ್ ಶೆಟ್ಟಿ, ಪ್ರಮೋದ್ ಬೋಪಣ್ಣ, ವೆಂಕಟೇಶ್ ಅಡಿಗ ಮೊದಲಾದವರು ಧಾರಾವಾಹಿ, ರಿಯಾಲಿಟಿ ಶೋಗಳ ಜತೆಗೆ ಚಿತ್ರರಂಗದಲ್ಲೂ ತಮ್ಮ ಗುರುತು ಮೂಡಿಸಿದ್ದಾರೆ. ಇದೀಗ ಈ ಸಾಲಿಗೆ ನಿರೂಪಕ ಜಯಪ್ರಕಾಶ್ ಶೆಟ್ಟಿ ಕೂಡ ಸೇರ್ಪಡೆಯಾಗಿದ್ದಾರೆ.

ಜಗ್ಗೇಶ್ ನಾಯಕನಾಗಿದ್ದ ‘ಸಾಫ್ಟ್‌ವೇರ್ ಗಂಡ’ ಚಿತ್ರ ಹಾಗೂ ‘ನಿರ್ಭಯ’ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಜಯಪ್ರಕಾಶ್ ಶೆಟ್ಟಿ, ಇದೀಗ ‘ಬನ’ ಚಿತ್ರದ ಮೂಲಕ ತುಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ‘ಧರ್ಮದೈವ’ ಹಾಗೂ 75 ದಿನಗಳ ಯಶಸ್ವಿ ಪ್ರದರ್ಶನ ಕಂಡ ‘ಧರ್ಮ ಚಾವಡಿ’ ಖ್ಯಾತಿಯ ನಿತಿನ್ ರೈ ಕುಕ್ಕುವಳ್ಳಿ ಈ ಚಿತ್ರಕ್ಕೆ ಆ್ಯಕ್ಷನ್–ಕಟ್ ಹೇಳುತ್ತಿದ್ದಾರೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಜೆ.ಪಿ. ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿದ ಜೆ.ಪಿ. ಶೆಟ್ಟಿ, “ಪಾತ್ರದ ಬಗ್ಗೆ ಈಗಲೇ ವಿವರ ನೀಡಲು ಸಾಧ್ಯವಿಲ್ಲ. ಆದರೆ ಕಥೆಗೆ ತಿರುವು ನೀಡುವ ಪ್ರಮುಖ ಪಾತ್ರ ನನ್ನದು. ಚಿತ್ರವನ್ನು ತುಳು ಜತೆಗೆ ಕನ್ನಡದಲ್ಲೂ ಬಿಡುಗಡೆ ಮಾಡುವ ಉದ್ದೇಶವಿದೆ. ಕಾಮಿಡಿ, ಫ್ಯಾಮಿಲಿ ಸೆಂಟಿಮೆಂಟ್, ಫೈಟ್ಸ್, ಡಾನ್ಸ್, ರೊಮ್ಯಾನ್ಸ್ ಸೇರಿದಂತೆ ಎಲ್ಲ ಅಂಶಗಳೂ ಚಿತ್ರದಲ್ಲಿವೆ. ಶೂಟಿಂಗ್ ಪೂರ್ಣಗೊಂಡಿದ್ದು, ಪ್ಯಾಚ್ ವರ್ಕ್ ಮಾತ್ರ ಬಾಕಿ. ಇದೇ ಜುಲೈನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ” ಎಂದರು.

ನಟನೆಗೆ ಮೊದಲಿನಿಂದಲೂ ಆಸಕ್ತಿ ಇತ್ತೆಂದು ಹೇಳಿದ ಅವರು, “ಚಿಕ್ಕ ವಯಸ್ಸಿನಿಂದಲೇ ರಂಗಭೂಮಿ ಹಾಗೂ ವೇದಿಕೆ ಕಾರ್ಯಕ್ರಮಗಳಲ್ಲಿ ಸಕ್ರಿಯನಾಗಿದ್ದೆ. ಸುದ್ದಿ ಮಾಧ್ಯಮಕ್ಕೆ ಬರಲು ಸಹ ಅದೇ ಕಾರಣ. ಸದ್ಯ ಚಿತ್ರರಂಗದತ್ತ ಹೆಚ್ಚು ಗಮನ ಹರಿಸಿದ್ದೇನೆ. ಅಮೃತ ಸಿನಿಕ್ರಾಫ್ಟ್ ಬ್ಯಾನರ್‌ನಲ್ಲಿ ‘ಮುಧೋಳ್’ ಸಿನಿಮಾ ನಿರ್ಮಾಣದಲ್ಲಿದೆ. 100ಕ್ಕೂ ಹೆಚ್ಚು ಕಥೆಗಳನ್ನು ಕೇಳಿದ್ದೇನೆ. ನಿರ್ಮಾಣದ ಜತೆಗೆ ಉತ್ತಮ ಪಾತ್ರ ದೊರೆತರೆ ನಟಿಸುತ್ತೇನೆ” ಎಂದು ಹೇಳಿದರು.

Advertisement

LEAVE A REPLY

Please enter your comment!
Please enter your name here