ಬೆಂಗಳೂರು, ಜ.23: ಐಟಿ ಕ್ಷೇತ್ರ ಸೇರಿದಂತೆ ಅನೇಕ ಸಾಧನೆಗಳ ಮೂಲಕ ಈಗಾಗಲೇ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ನಗರ, ಇದೀಗ ಸಂಚಾರ ದಟ್ಟಣೆಯಲ್ಲಿಯೂ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಟಾಮ್‌ಟಾಮ್ ಸಂಚಾರ ಸೂಚ್ಯಂಕ ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯಂತೆ, ವಿಶ್ವದಲ್ಲಿ ಅತಿಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಮೆಕ್ಸಿಕೊ ಮೊದಲ ಸ್ಥಾನದಲ್ಲಿದೆ.
ವರದಿಯ ಪ್ರಕಾರ, ಬೆಂಗಳೂರಿನ ಸರಾಸರಿ ಸಂಚಾರ ದಟ್ಟಣೆ ಶೇ.74.4ರಷ್ಟಿದ್ದು, 2024ರೊಂದಿಗೆ ಹೋಲಿಸಿದರೆ 2025ರಲ್ಲಿ ಶೇ.1.7ರಷ್ಟು ಹೆಚ್ಚಳ ಕಂಡಿದೆ. ನಗರದಲ್ಲಿ ಚಾಲಕರು 15 ನಿಮಿಷಗಳಲ್ಲಿ ಸರಾಸರಿ 4.2 ಕಿಲೋಮೀಟರ್ ದೂರವನ್ನಷ್ಟೇ ಕ್ರಮಿಸಲು ಸಾಧ್ಯವಾಗುತ್ತಿದೆ. 10 ಕಿಲೋಮೀಟರ್ ದೂರ ಸಾಗಲು ಸರಾಸರಿ 36 ನಿಮಿಷ 9 ಸೆಕೆಂಡುಗಳು ಬೇಕಾಗುತ್ತಿದೆ. ದಟ್ಟಣೆ ಸಮಯದಲ್ಲಿ ಗಂಟೆಗೆ ಸರಾಸರಿ ವಾಹನ ವೇಗ 13.9 ಕಿಮೀಗೆ ಇಳಿದಿದೆ ಎಂದು ವರದಿ ತಿಳಿಸಿದೆ.

2024ರಲ್ಲಿ 10 ಕಿಲೋಮೀಟರ್ ಪ್ರಯಾಣಿಸಲು ಸರಾಸರಿ 34 ನಿಮಿಷ 10 ಸೆಕೆಂಡುಗಳು ಬೇಕಾಗುತ್ತಿತ್ತು. ಒಂದು ವರ್ಷದ ಅವಧಿಯಲ್ಲಿ ಇದು 1.59 ನಿಮಿಷಗಳಷ್ಟು ಹೆಚ್ಚಳವಾಗಿದೆ. 2025ರಲ್ಲಿ ಬೆಂಗಳೂರಿನ ಒಟ್ಟಾರೆ ಸರಾಸರಿ ವಾಹನ ವೇಗ ಗಂಟೆಗೆ 16.6 ಕಿಮೀ ದಾಖಲಾಗಿದ್ದು, ಪೀಕ್ ಅವರ್‌ಗಳಲ್ಲಿ ಬೆಳಿಗ್ಗೆ 14.6 ಕಿಮೀ ಮತ್ತು ಸಂಜೆ 13.2 ಕಿಮೀಗಳಷ್ಟಾಗಿದೆ.
ಸಂಚಾರ ದಟ್ಟಣೆಯಿಂದಾಗಿ ನಗರದ ನಿವಾಸಿಗಳು 2025ರಲ್ಲಿ ಸರಾಸರಿ ಸುಮಾರು 168 ಗಂಟೆಗಳು (ಸುಮಾರು 7 ದಿನಗಳು) ಸಂಚಾರದಲ್ಲೇ ಕಳೆದಿದ್ದಾರೆ ಎಂಬುದು ಮತ್ತೊಂದು ಆತಂಕಕಾರಿ ಅಂಶವಾಗಿದೆ.
ಇನ್ನೊಂದೆಡೆ, ಚೆನ್ನೈ ಮತ್ತು ಹೈದರಾಬಾದ್ ನಗರಗಳು ಈ ಪಟ್ಟಿಯಲ್ಲಿ ಸಾಕಷ್ಟು ಕೆಳಮಟ್ಟದಲ್ಲಿದ್ದು, ಅವುಗಳ ಅಂಕಿಅಂಶಗಳು ಬೆಂಗಳೂರಿಗಿಂತ ಹೆಚ್ಚು ಆರೋಗ್ಯಕರವಾಗಿವೆ. 32ನೇ ಸ್ಥಾನದಲ್ಲಿರುವ ಚೆನ್ನೈ ಶೇ.58.6 ದಟ್ಟಣೆ ದಾಖಲಿಸಿದೆ. ಬೆಂಗಳೂರು ಹೊರತುಪಡಿಸಿ ಭಾರತದ ಆರು ನಗರಗಳು ಜಾಗತಿಕ ಅಗ್ರ 35 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಪುಣೆ ಶೇ.71.1 ದಟ್ಟಣೆಯೊಂದಿಗೆ ಐದನೇ ಸ್ಥಾನದಲ್ಲಿದೆ. ಮುಂಬೈ ಶೇ.63.2 (18ನೇ ಸ್ಥಾನ), ನವದೆಹಲಿ ಶೇ.60.2 (23ನೇ ಸ್ಥಾನ), ಕೋಲ್ಕತ್ತ ಶೇ.58.9 (29ನೇ ಸ್ಥಾನ), ಜೈಪುರ ಶೇ.58.7 (30ನೇ ಸ್ಥಾನ) ಮತ್ತು ಚೆನ್ನೈ ಶೇ.58.6 (32ನೇ ಸ್ಥಾನ) ದಟ್ಟಣೆ ಹೊಂದಿವೆ.
ವಿಶ್ವದ ಪ್ರಮುಖ ಐಟಿ ನಗರವೆಂಬ ಹೆಗ್ಗಳಿಕೆಗೆ ಜೊತೆಗೆ, ಸಂಚಾರ ದಟ್ಟಣೆಯಲ್ಲಿಯೂ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಬೆಂಗಳೂರು, ನಗರಾಭಿವೃದ್ಧಿ ಮತ್ತು ಸಂಚಾರ ನಿರ್ವಹಣೆ ಕುರಿತಾಗಿ ಹೊಸ ಪ್ರಶ್ನೆಗಳನ್ನು ಎತ್ತಿ ಹಿಡಿದಿದೆ.