
ಬೆಂಗಳೂರು, ಡಿ.26: ಹೊಸ ವರ್ಷದ ಸ್ವಾಗತಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗಿದ್ದು, ನಗರದಲ್ಲಿ ಶಾಂತಿ ಹಾಗೂ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರು ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಗುರುವಾರ ನಗರಾದ್ಯಂತ ಜಾರಿಯಲ್ಲಿರುವ ಭದ್ರತಾ ಸಿದ್ಧತೆಗಳನ್ನು ಖುದ್ದು ಪರಿಶೀಲಿಸಿದರು.
ನಗರದ ಪ್ರಮುಖ ಪ್ರದೇಶಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು, ಲೈವ್ ಮಾನಿಟರಿಂಗ್ ವ್ಯವಸ್ಥೆ, ಎಐ ಆಧಾರಿತ ಜನಸಂಚಾರ ವಿಶ್ಲೇಷಣಾ ಸಾಧನಗಳು, ಬ್ಯಾರಿಕೇಡ್‌ಗಳು ಹಾಗೂ ಪ್ರವೇಶ ನಿಯಂತ್ರಣ ವ್ಯವಸ್ಥೆಗಳ ಕುರಿತು ಆಯುಕ್ತರು ಪರಿಶೀಲನೆ ನಡೆಸಿದರು. ತುರ್ತು ಪರಿಸ್ಥಿತಿಗಳಿಗೆ ತ್ವರಿತ ಪ್ರತಿಕ್ರಿಯೆ ನೀಡುವ ವ್ಯವಸ್ಥೆ ಹಾಗೂ ಭದ್ರತಾ ಪ್ರೋಟೋಕಾಲ್‌ಗಳ ಸಮರ್ಪಕ ಜಾರಿಗೊಳಿಸುವಿಕೆಯನ್ನು ಕೂಡಾ ಅವಲೋಕಿಸಿದರು.
ಪರಿಶೀಲನೆ ಬಳಿಕ ಮಾತನಾಡಿದ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ಜನಸಂಚಾರದ ಸ್ವರೂಪವನ್ನು ನಿಖರವಾಗಿ ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಕ್ರಿಸ್‌ಮಸ್ ಹಬ್ಬದ ದಿನವೇ ಸ್ಥಳಗಳಿಗೆ ಭೇಟಿ ನೀಡಲಾಗಿದೆ ಎಂದು ತಿಳಿಸಿದರು. ಹೊಸ ವರ್ಷದ ದಿನದ ಭದ್ರತೆಗೆ ನಾಗರಿಕರ ಸಹಕಾರ ಅತ್ಯಂತ ಮುಖ್ಯವಾಗಿದ್ದು, ಪೊಲೀಸರು ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸುರಕ್ಷಿತವಾಗಿ ಹೊಸ ವರ್ಷವನ್ನು ಆಚರಿಸುವಂತೆ ಮನವಿ ಮಾಡಿದರು.
ಪೊಲೀಸರು ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು, ಜಾರಿಗೊಳಿಸಿರುವ ಕ್ರಮಗಳ ಪರಿಣಾಮಕಾರಿತ್ವವನ್ನು ವಿಶ್ಲೇಷಿಸಲಾಗುತ್ತಿದೆ. ಹೆಚ್ಚುವರಿ ಅಗತ್ಯಗಳಿದ್ದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಮಹಿಳೆಯರ ಭದ್ರತೆ, ಜನಸಂಚಾರ ಮತ್ತು ಟ್ರಾಫಿಕ್ ನಿಯಂತ್ರಣಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ನಗರವನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳುವುದೇ ನಮ್ಮ ಮುಖ್ಯ ಉದ್ದೇಶ ಎಂದು ಆಯುಕ್ತರು ಹೇಳಿದರು.





