
ಬಳ್ಳಾರಿ ಡಿ. 12: 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕವನ್ನು ತ್ವರಿತವಾಗಿ ಘೋಷಿಸಲು ಹಾಗೂ ಸ್ವಾಗತ ಸಮಿತಿಯನ್ನು ರಚಿಸಿ ಇದೇ ಆರ್ಥಿಕ ವರ್ಷದಲ್ಲೇ ಸಮ್ಮೇಳನ ನಡೆಸುವಂತೆ ಬಳ್ಳಾರಿಯ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾದ ಡಾ. ನಿಷ್ಟಿ ರುದ್ರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾಧಿಕಾರಿ ಮುಖಾಂತರ ಮನವಿ ಸಲ್ಲಿಸಿದರು.
ಮಂಡ್ಯದಲ್ಲಿ ಜರುಗಿದ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೇಳೆ ಕ.ಸಾ.ಪ ಕಾರ್ಯಕಾರಿ ಸಮಿತಿ ಬಳ್ಳಾರಿಯಲ್ಲಿ 88ನೇ ಸಮ್ಮೇಳನವನ್ನು ಆಯೋಜಿಸಲು ನಿರ್ಧರಿಸಿತ್ತು. 1958ರಲ್ಲಿ ಡಾ. ವಿ.ಕೃ. ಗೋಕಾಕ ಅವರ ಅಧ್ಯಕ್ಷತೆಯಲ್ಲಿ ಬಳ್ಳಾರಿಯಲ್ಲಿ ನಡೆದಿದ್ದ ಸಮ್ಮೇಳನ ಕಳೆದು 68 ವರ್ಷಗಳ ನಂತರ ಈ ಅವಕಾಶ ದೊರೆತಿದ್ದು, ಜಿಲ್ಲೆಯ ಜನತೆಗೆ ಇದು ಅತ್ಯಂತ ಗೌರವದ ಸಂಗತಿ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025–26ನೇ ಸಾಲಿನ ಬಜೆಟ್‌ನಲ್ಲಿ ರೂ.10 ಕೋಟಿ ಅನುದಾನ ಘೋಷಿಸಿದ್ದನ್ನು ಉಲ್ಲೇಖಿಸಿ, ಜಿಲ್ಲಾ ಉಸ್ತುವಾರಿ ಸಚಿವ ಬಿ. ಝಡ್. ಜಮೀರ್ ಅಹ್ಮದ್ ಖಾನ್ ಅವರು ಸ್ಥಳ ಪರಿಶೀಲನೆ ನಡೆಸಿದ ವಿಚಾರವನ್ನು ಪತ್ರದಲ್ಲಿ ನೆನಪಿಸಲಾಗಿದೆ.
ಕ.ಸಾ.ಪ ಕಾರ್ಯಕಾರಿ ಸಮಿತಿಯು ಜೂನ್ ತಿಂಗಳಲ್ಲಿ ನಡೆಸಿದ ಸಭೆಯಲ್ಲಿ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಬಾನು ಮುಸ್ತಾಕ್ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆಮಾಡಿ, ಡಿಸೆಂಬರ್ 26, 27 ಮತ್ತು 28ರಂದು ಸಮ್ಮೇಳನ ನಡೆಸಲು ನಿರ್ಧರಿಸಿತ್ತು. ಆದರೆ, ಕ.ಸಾ.ಪದಲ್ಲಿ ಉಂಟಾದ ಕಾನೂನಾತ್ಮಕ–ತಾಂತ್ರಿಕ ತೊಂದರೆಗಳಿಂದ ಆಡಳಿತಾಧಿಕಾರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಶ್ರೀಮತಿ ಕೆ.ಎಂ. ಗಾಯತ್ರಿ ಅವರನ್ನು ನೇಮಿಸಲಾಯಿತು. ಇದರ ಪರಿಣಾಮವಾಗಿ ಸಮ್ಮೇಳನದ ದಿನಾಂಕ ತಡವಾಯಿತು.
ಡಾ. ರುದ್ರಪ್ಪ ಅವರು,“ಬಳ್ಳಾರಿ ಗಡಿ ಜಿಲ್ಲೆಯಾಗಿದ್ದು, ಇಲ್ಲಿ ಸಾಹಿತ್ಯ ಸಮ್ಮೇಳನಕ್ಕಾಗಿ ಸಾವಿರಾರು ಕನ್ನಡಾಭಿಮಾನಿಗಳು, ವಿವಿಧ ಧಾರ್ಮಿಕ ನಾಯಕರು, ಸಂಘ–ಸಂಸ್ಥೆಗಳು ಹಾಗೂ ಗಡಿಯಾಚೆಯ ಕನ್ನಡಿಗರು ದೀರ್ಘಕಾಲದಿಂದ ನಿರೀಕ್ಷೆಯಲ್ಲಿದ್ದಾರೆ. ಆದ್ದರಿಂದ ಸಮ್ಮೇಳನವನ್ನು ಇದೇ ಆರ್ಥಿಕ ವರ್ಷದಲ್ಲೇ ಜರುಗಿಸಬೇಕೆಂದು ವಿನಯಪೂರ್ವಕ ಮನವಿ” ಎಂದು ತಿಳಿಸಿದ್ದಾರೆ. ಮನವಿಗೆ ಜಿಲ್ಲಾ ಮಟ್ಟದ ಅನೇಕ ಕನ್ನಡಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದರು.





