ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುವೆ: ಮಾಜಿ ಪ್ರಧಾನಿ ಶೇಖ್ ಹಸೀನಾ ಘೋಷಣೆ

0
3

ಮರಳಿದ ಬಳಿಕ ನ್ಯಾಯಾಲಯಕ್ಕೆ ಶರಣಾಗುವ ನಿರ್ಧಾರ; ಬಂಧನ ಅಥವಾ ಜೀವಕ್ಕೆ ಅಪಾಯದ ಆತಂಕ ವ್ಯಕ್ತಪಡಿಸಿದ ಹಸೀನಾ

ನವದೆಹಲಿ, ಜು.11: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು, ಅವಾಮಿ ಲೀಗ್‌ನ ಗಡಿಪಾರು ನಾಯಕರೊಂದಿಗೆ ಡಿಸೆಂಬರ್ ವೇಳೆಗೆ ಸ್ವಯಂಪ್ರೇರಿತವಾಗಿ ಬಾಂಗ್ಲಾದೇಶಕ್ಕೆ ಮರಳುವುದಾಗಿ ಘೋಷಿಸಿದ್ದಾರೆ. ಆದರೆ, ಸ್ವದೇಶಕ್ಕೆ ಮರಳಿದ ಬಳಿಕ ತಮ್ಮನ್ನು ಬಂಧಿಸುವ ಅಥವಾ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

2024ರ ಆಗಸ್ಟ್‌ನಲ್ಲಿ ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಯ ಬಳಿಕ ಅಧಿಕಾರ ಕಳೆದುಕೊಂಡು ಭಾರತದಲ್ಲಿ ಆಶ್ರಯ ಪಡೆದಿರುವ 78 ವರ್ಷದ ಶೇಖ್ ಹಸೀನಾ ಅವರು ಸುದ್ದಿಸಂಸ್ಥೆ ರಾಯಿಟರ್ಸ್‌ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. ಬಾಂಗ್ಲಾದೇಶಕ್ಕೆ ಹಿಂದಿರುಗಿದ ನಂತರ ನ್ಯಾಯಾಲಯದ ಮುಂದೆ ಸ್ವಯಂ ಶರಣಾಗುವುದಾಗಿ ಅವರು ಹೇಳಿದ್ದಾರೆ.

ಸ್ವದೇಶಕ್ಕೆ ಮರಳುವ ಸಂಬಂಧ ಢಾಕಾದಲ್ಲಿನ ಹಾಲಿ ಆಡಳಿತದೊಂದಿಗೆ ಯಾವುದೇ ರೀತಿಯ ಮಾತುಕತೆ ಅಥವಾ ಸಂವಹನ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ, 2024ರ ವಿದ್ಯಾರ್ಥಿ ಪ್ರತಿಭಟನೆಗಳ ವೇಳೆ ಮಾನವೀಯತೆಯ ವಿರುದ್ಧದ ಅಪರಾಧ ಎಸಗಿದ ಪ್ರಕರಣದಲ್ಲಿ ಶೇಖ್ ಹಸೀನಾ ಅವರನ್ನು ದೋಷಿ ಎಂದು ತೀರ್ಪು ನೀಡಿ ಮರಣದಂಡನೆ ವಿಧಿಸಿದೆ. ಪ್ರತಿಭಟನಾಕಾರರ ಸಾವನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ.

ಅದೇ ಪ್ರಕರಣದಲ್ಲಿ ಮಾಜಿ ಗೃಹ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ಅವರಿಗೆ ಮರಣದಂಡನೆ ಹಾಗೂ ಮಾಜಿ ಪೊಲೀಸ್ ಮಹಾನಿರ್ದೇಶಕ ಚೌಧರಿ ಅಬ್ದುಲ್ಲಾ ಅಲ್-ಮಾಮುನ್ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇದಲ್ಲದೆ, ಶೇಖ್ ಹಸೀನಾ ಹಾಗೂ ಅಸದುಜ್ಜಮಾನ್ ಖಾನ್ ಕಮಲ್ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಬಾಂಗ್ಲಾದೇಶ ಸರ್ಕಾರಕ್ಕೆ ನ್ಯಾಯಮಂಡಳಿ ನಿರ್ದೇಶನ ನೀಡಿದೆ.

LEAVE A REPLY

Please enter your comment!
Please enter your name here