2028ರೊಳಗೆ ಡ್ರಗ್ಸ್ ಮುಕ್ತ ಕರ್ನಾಟಕ ಗುರಿ: ‘ಬೇಡ BRO’ ಅಭಿಯಾನಕ್ಕೆ ಸಿಎಂ ಚಾಲನೆ

0
2

ಬೆಂಗಳೂರು, ಜು.1: ರಾಜ್ಯವನ್ನು 2028ರೊಳಗೆ ಸಂಪೂರ್ಣವಾಗಿ ಡ್ರಗ್ಸ್ ಮುಕ್ತ ಹಾಗೂ ವ್ಯಸನಮುಕ್ತ ಕರ್ನಾಟಕವನ್ನಾಗಿ ರೂಪಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ಹೇಳಿದರು.

ನಗರದ ಕಂಠೀರವ ಸ್ಟೇಡಿಯಂನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಾದಕ ವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ–2026 ಅಂಗವಾಗಿ ‘ಬೇಡ BRO (Beda BRO)’ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಯುವಜನತೆ ಸರ್ಕಾರದೊಂದಿಗೆ ಕೈಜೋಡಿಸಿದರೆ ರಾಜ್ಯದಿಂದ ಮಾದಕ ವಸ್ತುಗಳ ಜಾಲವನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಹಾಗೂ ಯುವಕರು ಯಾವುದೇ ಕಾರಣಕ್ಕೂ ಸ್ನೇಹಿತರ ಒತ್ತಡಕ್ಕೆ ಮಣಿದು ಡ್ರಗ್ಸ್ ವ್ಯಸನಕ್ಕೆ ಒಳಗಾಗಬಾರದು. ವ್ಯಸನವನ್ನು ತೊರೆದು ಆರೋಗ್ಯಕರ ಹಾಗೂ ಸಂತೋಷದ ಬದುಕು ನಡೆಸುವ ಜೊತೆಗೆ ಇತರರಲ್ಲೂ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಕಳೆದ ಮೂರು ವರ್ಷಗಳಲ್ಲಿ ಮಾಜಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ಸುಮಾರು 89 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ ಎಂದು ತಿಳಿಸಿದ ಮುಖ್ಯಮಂತ್ರಿ, ಪೋಷಕರು ಮಕ್ಕಳ ಡ್ರಗ್ಸ್ ವ್ಯಸನವನ್ನು ಸಮಾಜದ ಭಯದಿಂದ ಮುಚ್ಚಿಡಬಾರದು ಎಂದರು. ಮಕ್ಕಳಿಗೆ ಸೂಕ್ತ ಸಮಾಲೋಚನೆ ನೀಡಿ ಪೊಲೀಸರನ್ನು ಸಂಪರ್ಕಿಸಿದರೆ ಡ್ರಗ್ಸ್ ಪೂರೈಕೆ ಜಾಲವನ್ನು ಪತ್ತೆಹಚ್ಚಲು ನೆರವಾಗುತ್ತದೆ. ಮಾಹಿತಿ ನೀಡುವ ಮಕ್ಕಳು ಹಾಗೂ ಕುಟುಂಬಗಳ ಗುರುತನ್ನು ಸಂಪೂರ್ಣ ಗೌಪ್ಯವಾಗಿಡುವಂತೆ ಪೊಲೀಸ್ ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಡ್ರಗ್ಸ್ ಜಾಲದ ಕುರಿತು ಗೌಪ್ಯ ಮಾಹಿತಿ ನೀಡುವವರಿಗೆ ಪೊಲೀಸ್ ಇಲಾಖೆ ಬಹುಮಾನ ನೀಡಲಿದ್ದು, ಇದರಿಂದ ಪೂರೈಕೆ ಜಾಲವನ್ನು ಬೇರುಸಹಿತ ನಿರ್ಮೂಲನೆ ಮಾಡಲು ನೆರವಾಗಲಿದೆ ಎಂದರು. ಪಾನ್ ಮಸಾಲಾ ಹಾಗೂ ಗುಟ್ಕಾಗಳಲ್ಲಿ ಮಾದಕ ಪದಾರ್ಥಗಳನ್ನು ಬೆರೆಸಿ ಮಾರಾಟ ಮಾಡುತ್ತಿರುವುದು ಮತ್ತು ಮೊಬೈಲ್ ಹಾಗೂ ದೂರವಾಣಿ ಜಾಲದ ಮೂಲಕ ಮನೆ ಮನೆಗೆ ಡ್ರಗ್ಸ್ ಪೂರೈಕೆ ಮಾಡುವ ಜಾಲ ಸಕ್ರಿಯವಾಗಿರುವ ಮಾಹಿತಿ ಸರ್ಕಾರಕ್ಕೆ ಲಭಿಸಿದ್ದು, ಇಂತಹ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಮಾತನಾಡಿದ ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಡ್ರಗ್ಸ್ ನಿರ್ಮೂಲನೆಗೆ ರಾಜ್ಯ ಸರ್ಕಾರ ‘ಶೂನ್ಯ ಸಹಿಷ್ಣುತೆ (Zero Tolerance)’ ನೀತಿಯನ್ನು ಅನುಸರಿಸುತ್ತಿದೆ ಎಂದು ಹೇಳಿದರು.

ಡ್ರಗ್ಸ್ ವಿರುದ್ಧದ ಹೋರಾಟ ಕೇವಲ ಪೊಲೀಸ್ ಕಾರ್ಯಾಚರಣೆಗೆ ಸೀಮಿತವಾಗದೆ ಜನಾಂದೋಲನವಾಗಿ ರೂಪುಗೊಳ್ಳಬೇಕು ಎಂಬ ಉದ್ದೇಶದಿಂದಆಪರೇಷನ್ RISE (Refuse, Inform, Support, Empower)’ ಕಾರ್ಯಕ್ರಮವನ್ನು ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯಾದ್ಯಂತ ಆರಂಭಗೊಂಡಿರುವ ‘ಬೇಡ BRO’ ಅಭಿಯಾನದಡಿ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಹಾಗೂ ಯುವಜನರು ಹೆಚ್ಚಿರುವ ಪ್ರದೇಶಗಳಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಡ್ರಗ್ಸ್ ವ್ಯಸನಕ್ಕೆ ಪ್ರಮುಖ ಕಾರಣವಾಗಿರುವ ಸ್ನೇಹಿತರ ಒತ್ತಡ (Peer Pressure) ಕುರಿತು ವಿಶೇಷ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

“ಒಬ್ಬ ಸ್ನೇಹಿತನ ತಪ್ಪು ಪ್ರಭಾವ ಇಡೀ ಜೀವನವನ್ನೇ ಹಾಳು ಮಾಡಬಹುದು” ಎಂಬ ಸಂದೇಶವನ್ನು ‘ಬೇಡ BRO’ ಅಭಿಯಾನದ ಮೂಲಕ ಯುವಜನರಿಗೆ ತಲುಪಿಸಲಾಗುವುದು. ಇದು ಕೇವಲ ಜಾಗೃತಿ ಅಭಿಯಾನವಲ್ಲ, ಯುವಜನರ ಬದುಕನ್ನು ಉಳಿಸುವ ಸಾಮಾಜಿಕ ಚಳವಳಿಯಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್ ಅರ್ಷದ್, ಡಿಜಿ ಮತ್ತು ಐಜಿಪಿ ಎಂ.ಎ. ಸಲೀಂ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

184.72 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

ರಾಜ್ಯ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, 2026ರ ಮೇ 31ರವರೆಗೆ 184.72 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ 1,406 ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಲಾಗಿದ್ದು, ಒಟ್ಟು 6,651 ಆರೋಪಿಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಅಲ್ಲದೆ 5,090 ಡ್ರಗ್ ಸೇವಕರು ಹಾಗೂ 17 ಡ್ರಗ್ ತಯಾರಕರನ್ನು ಬಂಧಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

LEAVE A REPLY

Please enter your comment!
Please enter your name here