ಸತ್ಯಸಾಯಿ ಗ್ರಾಮ ಪಂಚಧಾಮವಾಗಿ ರೂಪುಗೊಂಡಿರುವುದು ಹೆಮ್ಮೆಯ ಸಂಗತಿ: ಬಿಜ್ಜವರ ಎಚ್. ಲೋಕೇಶ್

0
9

ಐದು ಕೋಟಿ ಸಸಿಗಳ ನೆಡುವ ಹಾಗು ಎಲ್ಲ ಜಲಮೂಲಗಳ ಶುದ್ಧೀಕರಣ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸುವಂತೆ ಮನವಿ

ಚಿಕ್ಕಬಳ್ಳಾಪುರ, ಜೂ.14: ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ಆಶೀರ್ವಾದ ಹಾಗೂ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಮಾರ್ಗದರ್ಶನ ಹಾಗು ನೇತೃತ್ವದಲ್ಲಿ ಸತ್ಯಸಾಯಿ ಗ್ರಾಮವು ಪುಣ್ಯಧಾಮ, ಸಂಸ್ಕಾರಧಾಮ, ಅಕ್ಷರಧಾಮ, ಆರೋಗ್ಯಧಾಮ ಹಾಗೂ ಅನ್ನಧಾಮಗಳನ್ನು ಒಳಗೊಂಡ ಪಂಚಧಾಮವಾಗಿ ರೂಪುಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ವಂದೇ ಭಾರತಂ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಬಿಜ್ಜವರ ಎಚ್. ಲೋಕೇಶ್ ಹೇಳಿದರು.

ರಾಜ್ಯಾದ್ಯಂತ 5 ಕೋಟಿ ಸಸಿಗಳನ್ನು ನೆಡುವುದು ಹಾಗೂ ಕೆರೆ, ಕೊಳ, ನದಿ ಸೇರಿದಂತೆ ಜಲಮೂಲಗಳ ಪುನರುಜ್ಜೀವನ, ಸಂರಕ್ಷಣೆ ಮತ್ತು ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವ, ಹೊಗೆ ಮೂಲಗಳನ್ನು ನಿಯಂತ್ರಿಸುವ ಮಹತ್ವಾಕಾಂಕ್ಷಿ ಪರಿಸರ ಅಭಿಯಾನಕ್ಕೆ ಶುಕ್ರವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿರುವ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಆವರಣದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ವಂದನಾರ್ಪಣಾ ಭಾಷಣ ಮಾಡುತ್ತಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.‌ನಾಡಗೀತೆ ಹಾಗೂ ವಂದೇ ಮಾತರಂ ಗೀತೆಗಳನ್ನು ಹಾಡುವ ಮೂಲಕ ಆರಂಭಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ. ಬಿ.ಎನ್. ನರಸಿಂಹಮೂರ್ತಿ ಮಾತಾನಾಡಿ, ಸಸಿ ನೆಡುವಿಕೆಯ ಮಹತ್ವವನ್ನು ತಿಳಿಸಿದರು.

‘ಒನ್ ವರ್ಲ್ಡ್ ಒನ್ ಫ್ಯಾಮಿಲಿ’ ಮಿಷನ್ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ವೀಡಿಯೊ ಸಂವಾದದ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಪರಿಸರ ಸಂರಕ್ಷಣೆ ಹಾಗೂ ಹಸಿರು ಅಭಿಯಾನದ ಮಹತ್ವದ ಕುರಿತು ಸಂದೇಶ ನೀಡಿದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪೋಷಕರಾದ ನ್ಯಾಯಮೂರ್ತಿ ವಿಭು ಬಖ್ರು, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷೆ ನ್ಯಾಯಮೂರ್ತಿ ಅನು ಶಿವರಾಮನ್, ಟಿ.ಪಿ. ರಾಮಲಿಂಗೇಗೌಡ ಪ್ರಧಾನ ಜಿಲ್ಲಾ ಮತ್ತು ಸದರಿ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (ಡಿಎಲ್‌ಎಸ್‌ಎ), ಚಿಕ್ಕಬಳ್ಳಾಪುರ ಜಿಲ್ಲೆ, ಎಂ. ಚಂದ್ರಶೇಖರ್ ರೆಡ್ಡಿ ನೋಂದಣಾಧಿಕಾರಿ ಜನರಲ್, ಕರ್ನಾಟಕ ಉಚ್ಚ ನ್ಯಾಯಾಲಯ ಕೆ.ವಿ. ಅಭಿಲಾಷ್, ಅಧ್ಯಕ್ಷರು, ವಕೀಲರ ಸಂಘ, ಚಿಕ್ಕಬಳ್ಳಾಪುರ, ಎಚ್. ಶಶಿಧರ ಶೆಟ್ಟಿ, ಜಿಲ್ಲಾ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ), ಬೆಂಗಳೂರು, ಡಿ.ಎಂ. ಪೂರ್ಣೇಶ್, ನಿರ್ದೇಶಕರು, ಧಾರೆ ಫೌಂಡೇಶನ್, ಬೆಂಗಳೂರು‌ ಉಪಸ್ಥಿತರಿದ್ದರು.

ಸತ್ಯಸಾಯಿ ಗ್ರಾಮವು ಮಾನವಸೇವೆ, ಶಿಕ್ಷಣ, ಸಂಸ್ಕಾರ ಹಾಗೂ ಸಾಮಾಜಿಕ ಅಭಿವೃದ್ಧಿಯ ಕೇಂದ್ರವಾಗಿ ಬೆಳೆದಿದ್ದು, ಸಮಾಜಕ್ಕೆ ಮಾದರಿಯಾದ ಅನೇಕ ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಪುಣ್ಯಧಾಮ, ಸಂಸ್ಕಾರ ಧಾಮ, ವಿದ್ಯಾಧಾಮ, ಅಕ್ಷರಧಾಮ ಹಾಗೂ ಅನ್ನಧಾಮಗಳ ಸಮನ್ವಯದ ಮೂಲಕ ಸತ್ಯಸಾಯಿ ಗ್ರಾಮವು ವಿಶಿಷ್ಟ ಗುರುತನ್ನು ಪಡೆದಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ‘ವಂದೇ ಭಾರತಂ’ ನ ಕನಸಿನ ಕೂಸು, ‘ಧಾತ್ರೀ (THE-THREE)’ ಮೊಬೈಲ್ ಆ್ಯಪ್ ಕುರಿತು ವಿವರಿಸಲಾಯಿತು. ಮಣ್ಣು, ನೀರು ಹಾಗೂ ಗಾಳಿ (Soil-Water-Air) ಎಂಬ ಪ್ರಕೃತಿಯ ಮೂರು ಮೂಲ ಅಂಶಗಳ ಸಂರಕ್ಷಣೆಯನ್ನು ಕೇಂದ್ರವಾಗಿಟ್ಟುಕೊಂಡು ರೂಪಿಸಲಾಗಿರುವ ಈ ವಿನೂತನ ಡಿಜಿಟಲ್ ವೇದಿಕೆಯು ಸಸಿ ನೆಡುವಿಕೆ, ಸಂರಕ್ಷಣೆ, ವಿಸ್ತರಣೆ ಹಾಗೂ ಮಾಹಿತಿಯ ನಿರ್ವಹಣೆಯನ್ನು ಒಂದೇ ವೇದಿಕೆಯಡಿ ತರುವ ಉದ್ದೇಶ ಹೊಂದಿದೆ. ವಂದೇ ಭಾರತಂನ ವಿಶಿಷ್ಟ ‘CIISR – Communities, Institutions, Individuals Social Responsibility’ (ಸಿಐಐಎಸ್‌ಆರ್’ – ಸಮುದಾಯಗಳು, ಸಂಸ್ಥೆಗಳು ಹಾಗೂ ವ್ಯಕ್ತಿಗಳ ಸಾಮಾಜಿಕ ಹೊಣೆಗಾರಿಕೆ) ಪರಿಕಲ್ಪನೆಯಡಿ ರೂಪುಗೊಂಡಿರುವ ಈ ತಂತ್ರಾಂಶವು ವಿವಿಧ ಪಾಲುದಾರರನ್ನು ಒಂದೇ ಉದ್ದೇಶಕ್ಕಾಗಿ ಒಗ್ಗೂಡಿಸುವ ಪ್ರಯತ್ನವಾಗಿದೆ.

ಸಸಿ ನೆಡುವಿಕೆಗಾಗಿ ಯೋಜನೆ ರೂಪಿಸುವುದರಿಂದ ಹಿಡಿದು, ಸಸಿಗಳ ಬೆಳವಣಿಗೆ ಮೇಲ್ವಿಚಾರಣೆ, ಜವಾಬ್ದಾರಿಗಳ ಹಂಚಿಕೆ ಹಾಗೂ ಪಾರದರ್ಶಕ ಮಾಹಿತಿ ನಿರ್ವಹಣೆವರೆಗೆ ಎಲ್ಲ ಹಂತಗಳನ್ನು ಡಿಜಿಟಲ್ ಮೂಲಕ ನಿರ್ವಹಿಸಲು ಈ ವೇದಿಕೆ ನೆರವಾಗಲಿದೆ. ಪ್ರತಿ ಸಸಿಯನ್ನು ಮಗುವಿನಂತೆ ಪರಿಗಣಿಸಿ ಕನಿಷ್ಠ ಮೂರುರಿಂದ ನಾಲ್ಕು ಬೇಸಿಗೆಗಳವರೆಗೆ ಅದರ ಪೋಷಣೆ ಮತ್ತು ಮೇಲ್ವಿಚಾರಣೆ ನಡೆಸುವ ವ್ಯವಸ್ಥೆ ಇದರಲ್ಲಿ ಅಳವಡಿಸಲಾಗಿದೆ. ಜಲಮೂಲಗಳು ಮತ್ತು ವಾಯುಮಾಲಿನ್ಯ ಮೂಲಗಳ ಸುತ್ತ ನಾಗರಿಕರ ಪಾಲನಾ ಸಮುದಾಯಗಳನ್ನು ನಿರ್ಮಿಸುವ ಉದ್ದೇಶವನ್ನೂ ಇದು ಹೊಂದಿದೆ ಎಂದು ವಿವರಿಸಲಾಯಿತು.

ಹವಾಮಾನ ಬದಲಾವಣೆಗೆ ತಡೆ ನೀಡುವ ‘ನೆಟ್ ಝೀರೊ’ ಗುರಿಯೊಂದಿಗೆ, ಮಾಲಿನ್ಯ ಮುಕ್ತ ‘ಡರ್ಟ್ ಝೀರೊ’ ಪರಿಕಲ್ಪನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಯೋಜನೆ ಹೊಸ ಅಧ್ಯಾಯವಾಗಲಿದೆ. ಮುಂದಿನ ಪೀಳಿಗೆಗೆ ಉತ್ತಮ ಭೂಮಿಯನ್ನು ಬಿಟ್ಟು ಹೋಗುವ ‘ಆರ್ಟ್ ಆಫ್ ಲೀವಿಂಗ್’(Art Of Leaving) ಸಂಕಲ್ಪವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಲಾಯಿತು.

ಪರಿಸರ ಸಂರಕ್ಷಣೆ, ಜಲಮೂಲಗಳ ಪುನರುಜ್ಜೀವನ ಹಾಗೂ ಹಸಿರು ಕರ್ನಾಟಕ ನಿರ್ಮಾಣದ ಉದ್ದೇಶದಿಂದ ಆರಂಭಗೊಂಡಿರುವ ಈ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಗೌರವನ್ವಿತ ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ಮನವಿ ಮಾಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಟಿ.ಪಿ. ರಾಮಲಿಂಗೇಗೌಡ ಸ್ವಾಗತಿಸಿದರು. ಶಿಲ್ಪಾ ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (ಡಿಎಲ್‌ಎಸ್‌ಎ), ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಶ್ರೀಧರ ಎಂ. ಉಪ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ), ಬೆಂಗಳೂರು, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here