ವಿಜಯಪುರ, ಜೂನ್ 13: ಆರ್ಥಿಕ ಸಂಕಷ್ಟದ ನಡುವೆಯೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುವ ಕನಸು ಹೊತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ತನು ಫೌಂಡೇಷನ್ (ರಿ), ವಿಜಯಪುರ ವತಿಯಿಂದ ‘ವಂದೇ ಮಾತರಂ ರಾಜ್ಯ ಪ್ರಶಸ್ತಿ–2026’ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.
ಶಿಕ್ಷಣವು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದ್ದು, ಕೇವಲ ಹಣಕಾಸಿನ ಕೊರತೆಯಿಂದ ಯಾವುದೇ ಪ್ರತಿಭೆ ಬೆಳಕಿಗೆ ಬಾರದೆ ಉಳಿಯಬಾರದು ಎಂಬ ಧ್ಯೇಯದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತನು ಫೌಂಡೇಷನ್ ಅಧ್ಯಕ್ಷ ವಿಜುಗೌಡ ಕಾಳಶೆಟ್ಟಿ ತಿಳಿಸಿದ್ದಾರೆ.
ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು, ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಆರ್ಥಿಕ ನೆರವು ಹಾಗೂ ಉತ್ತೇಜನ ನೀಡುವುದು, ಪ್ರತಿಭೆಗಳಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಅವಕಾಶ ಕಲ್ಪಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಜೊತೆಗೆ ಸಾಹಿತ್ಯ, ವಿಜ್ಞಾನ, ಕಲೆ, ಕ್ರೀಡೆ, ಪತ್ರಿಕೋದ್ಯಮ, ವೈದ್ಯಕೀಯ, ಲಲಿತಕಲೆ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕನಿಷ್ಠ 5 ರಿಂದ 10 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿ ಗಮನಾರ್ಹ ಸಾಧನೆಗೈದ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
‘ಕನಸುಗಳಿಗೆ ರೆಕ್ಕೆ’ ಎಂಬ ಧ್ಯೇಯದೊಂದಿಗೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಬೆಳೆಸುವುದು ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರ ಸೇವೆಯನ್ನು ಗೌರವಿಸುವ ಮೂಲಕ ಇತರರಿಗೆ ಪ್ರೇರಣೆ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ಸಾಧಕರು ತಮ್ಮ ಸಂಪೂರ್ಣ ವಿವರ, ಸಾಧನೆಯ ಸಂಕ್ಷಿಪ್ತ ವರದಿ, ಸಾಧನೆಗೆ ಪೂರಕವಾದ ಪತ್ರಿಕಾ ವರದಿಗಳು, ಪ್ರಶಸ್ತಿ ಪತ್ರಗಳು ಅಥವಾ ಛಾಯಾಚಿತ್ರಗಳು, ಒಂದು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ, ಆಧಾರ್ ಕಾರ್ಡ್ ಪ್ರತಿ ಹಾಗೂ ಪ್ಯಾನ್ ಕಾರ್ಡ್ ಪ್ರತಿಯನ್ನು (ಕಡ್ಡಾಯ) ಸಲ್ಲಿಸಬೇಕು. ಎಲ್ಲಾ ದಾಖಲೆಗಳನ್ನು ಪಿಡಿಎಫ್ (PDF) ರೂಪದಲ್ಲಿ ಸಿದ್ಧಪಡಿಸಿ ಕಳುಹಿಸಬೇಕಾಗಿದೆ.
ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಂದ ಅರ್ಜಿ ಮತ್ತು ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿದ್ದು, ಜೂನ್ 25, 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಕಾರ್ಯಕ್ರಮದ ಸ್ಥಳ, ದಿನಾಂಕ ಹಾಗೂ ಸಮಯವನ್ನು ನಂತರ ಪ್ರಕಟಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
“ಒಂದು ಮಗುವಿಗೆ ನೀಡುವ ಶಿಕ್ಷಣ ದೇಶದ ಭವಿಷ್ಯಕ್ಕೆ ನೀಡುವ ಕೊಡುಗೆಯಾಗಿದೆ. ಬನ್ನಿ, ಪ್ರತಿಭೆಗಳನ್ನು ಗೌರವಿಸೋಣ, ಅವರ ಸಾಧನೆಯ ಹಾದಿಗೆ ಬೆಳಕಾಗೋಣ” ಎಂದು ವಿಜುಗೌಡ ಕಾಳಶೆಟ್ಟಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ತನು ಫೌಂಡೇಷನ್ ಅಧ್ಯಕ್ಷ ವಿಜುಗೌಡ ಕಾಳಶೆಟ್ಟಿ ಅವರನ್ನು 9743235649 ಸಂಖ್ಯೆಯಲ್ಲಿ ಸಂಪರ್ಕಿಸಬಹುದು. ಅರ್ಜಿಗಳನ್ನು tanufoundationbjp@gmail.com ಇ-ಮೇಲ್ ವಿಳಾಸಕ್ಕೆ ಅಥವಾ 8880586586 ವಾಟ್ಸಾಪ್ ಸಂಖ್ಯೆಗೆ ಕಳುಹಿಸಬಹುದಾಗಿದೆ.




