ರಿಯಾದ್/ನವದೆಹಲಿ, ಏ.20: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಸೌದಿ ಅರೇಬಿಯಾಕ್ಕೆ ಭೇಟಿ ನೀಡಿ, ಅಲ್ಲಿನ ಉನ್ನತ ನಾಯಕರೊಂದಿಗೆ ದ್ವಿಪಕ್ಷೀಯ ಸಂಬಂಧಗಳು ಹಾಗೂ ಪ್ರಾದೇಶಿಕ ಬೆಳವಣಿಗೆಗಳ ಕುರಿತು ಮಹತ್ವದ ಮಾತುಕತೆ ನಡೆಸಿದರು.
ರಿಯಾದ್‌ಗೆ ಆಗಮಿಸಿದ ದೋವಲ್ ಅವರನ್ನು ಸೌದಿ ಅರೇಬಿಯಾದ ಉಪ ಸಚಿವರು ಹಾಗೂ ಭಾರತದ ರಾಯಭಾರಿ ಸುಹೇಲ್ ಖಾನ್ ಆತ್ಮೀಯವಾಗಿ ಬರಮಾಡಿಕೊಂಡರು.
ಭಾರತವು ತನ್ನ ಪ್ರಮುಖ ಪಾಲುದಾರ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸುತ್ತಿರುವ ಸಂದರ್ಭದಲ್ಲಿ ದೋವಲ್ ಅವರ ಭೇಟಿ ತೀವ್ರ ಕುತೂಹಲ ಕೆರಳಿಸಿದೆ. ತಮ್ಮ ಭೇಟಿಯ ಅವಧಿಯಲ್ಲಿ ಅವರು ಸೌದಿ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್, ಇಂಧನ ಸಚಿವ ಅಬ್ದುಲ್ ಅಜೀಜ್ ಬಿನ್ ಸಲ್ಮಾನ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಸಾಯಿದ್ ಅಲ್ ಐಬಾನಾ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದರು.
ಈ ಸಭೆಗಳಲ್ಲಿ ಭಾರತ–ಸೌದಿ ಬಾಂಧವ್ಯ, ಪಶ್ಚಿಮ ಏಷ್ಯಾದ ಪ್ರಸಕ್ತ ಸನ್ನಿವೇಶ ಹಾಗೂ ಪರಸ್ಪರ ಹಿತಾಸಕ್ತಿಯ ಹಲವು ವಿಷಯಗಳು ಚರ್ಚೆಗೆ ಬಂದವು ಎಂದು ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಪೂರೈಕೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಸಹ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ. ವಿಶೇಷವಾಗಿ ಹೊರ್ಮುಜ್ ಜಲಸಂಧಿ ಮಾರ್ಗದಲ್ಲಿನ ಅಡೆತಡೆಗಳಿಂದ ಇಂಧನ ಸರಬರಾಜಿಗೆ ಆತಂಕ ಎದುರಾಗಿರುವ ಸಂದರ್ಭದಲ್ಲಿ, ಸೌದಿ ಅರೇಬಿಯಾದೊಂದಿಗೆ ಇಂಧನ ಸಹಕಾರದ ಕುರಿತು ಸಮಾಲೋಚನೆ ನಡೆಸಿರುವುದು ಮಹತ್ವ ಪಡೆದಿದೆ.
ರಷ್ಯಾ ಹಾಗೂ ಇರಾಕ್ ಬಳಿಕ ಭಾರತಕ್ಕೆ ಅತಿ ಹೆಚ್ಚು ಇಂಧನ ಪೂರೈಸುವ ರಾಷ್ಟ್ರಗಳಲ್ಲಿ ಸೌದಿ ಅರೇಬಿಯಾ ಮೂರನೇ ಸ್ಥಾನದಲ್ಲಿದೆ. ಅಲ್ಲದೆ ಸುಮಾರು ೪೦ ಲಕ್ಷಕ್ಕೂ ಹೆಚ್ಚು ಭಾರತೀಯರು ಅಲ್ಲಿ ನೆಲೆಸಿರುವುದರಿಂದ ಅವರ ಹಿತರಕ್ಷಣೆಯೂ ಭಾರತದ ಪ್ರಮುಖ ಆದ್ಯತೆಯಾಗಿದೆ.




