ವಿಶ್ವದ ಮೊದಲ ವನ್ಯಜೀವಿ–ಪಶುವೈದ್ಯಕೀಯ ವಿವಿ ಸ್ಥಾಪನೆ: ಅನಂತ್ ಅಂಬಾನಿ ಘೋಷಣೆ

0
2
Advertisement

ಗುಜರಾತ್, ಏ.11: ಅನಂತ್ ಅಂಬಾನಿ ಅವರ ಮುಂದಾಳತ್ವದಲ್ಲಿ ಸ್ಥಾಪಿತವಾದ ಜಾಗತಿಕ ವನ್ಯಜೀವಿ ಸಂರಕ್ಷಣ ಸಂಸ್ಥೆ ವನತಾರಾ ಗುಜರಾತ್‌ನ ಜಾಮ್‌ನಗರದಲ್ಲಿ “ವನತಾರಾ ವಿಶ್ವವಿದ್ಯಾನಿಲಯ” ಸ್ಥಾಪಿಸುವುದಾಗಿ ಘೋಷಿಸಿದೆ. ವನ್ಯಜೀವಿ ಸಂರಕ್ಷಣೆ ಹಾಗೂ ಪಶುವೈದ್ಯಕೀಯ ವಿಜ್ಞಾನಕ್ಕೆ ಮೀಸಲಾದ ವಿಶ್ವದ ಮೊದಲ ಸಂಯೋಜಿತ ಜಾಗತಿಕ ವಿಶ್ವವಿದ್ಯಾನಿಲಯವೆಂದು ಇದು ಗುರುತಿಸಿಕೊಳ್ಳಲಿದೆ.

ಈ ವಿಶ್ವವಿದ್ಯಾನಿಲಯವು ಪ್ರಾಣಿಗಳ ಕಲ್ಯಾಣ, ವೈಜ್ಞಾನಿಕ ಪ್ರಗತಿ ಹಾಗೂ ವನ್ಯಜೀವಿ ಸಂರಕ್ಷಣೆಯ ಭವಿಷ್ಯದ ಮೇಲೆ ಕೇಂದ್ರೀಕೃತವಾಗಿದ್ದು, ಪಶುವೈದ್ಯಕೀಯ ಕ್ಷೇತ್ರ, ಸಂರಕ್ಷಣೆ ಮತ್ತು ವನ್ಯಜೀವಿ ಆರೈಕೆಯಲ್ಲಿ ಮುಂದಿನ ಪೀಳಿಗೆಯ ನಾಯಕರನ್ನು ರೂಪಿಸುವುದೇ ಇದರ ಪ್ರಮುಖ ಉದ್ದೇಶವಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಅನಂತ್ ಅಂಬಾನಿ, “ಸಂರಕ್ಷಣೆಯ ಭವಿಷ್ಯವು ಕರುಣೆ, ಜ್ಞಾನ ಮತ್ತು ಕೌಶಲದ ಮೇಲೆ ಅವಲಂಬಿತವಾಗಿದೆ. ಪ್ರಾಚೀನ ನಳಂದಾ ವಿಶ್ವವಿದ್ಯಾಲಯ ಆದರ್ಶಗಳಿಂದ ಪ್ರೇರಿತವಾಗಿ, ‘ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತಃ’ ಎಂಬ ಮಂತ್ರದ ಆಶಯದೊಂದಿಗೆ ಈ ವಿಶ್ವವಿದ್ಯಾನಿಲಯವು ಪ್ರತಿಯೊಂದು ಜೀವವನ್ನು ರಕ್ಷಿಸಲು ಬದ್ಧವಾದ ಪೀಳಿಗೆಯನ್ನು ರೂಪಿಸಲಿದೆ” ಎಂದು ತಿಳಿಸಿದ್ದಾರೆ.


ವಿಶ್ವವಿದ್ಯಾನಿಲಯದ ವೈಶಿಷ್ಟ್ಯಗಳು

ವನತಾರಾ ವಿಶ್ವವಿದ್ಯಾನಿಲಯವು ಕೇವಲ ಶೈಕ್ಷಣಿಕ ಸಂಸ್ಥೆಯಾಗಿರದೆ, ವನ್ಯಜೀವಿಗಳ ಸಂರಕ್ಷಣೆಗೆ ಅಗತ್ಯವಾದ ಜ್ಞಾನ, ವ್ಯವಸ್ಥೆ ಮತ್ತು ಪರಿಣತಿಯನ್ನು ಒದಗಿಸುವ ಕೇಂದ್ರವಾಗಿರಲಿದೆ. ಅಂತಾರಾಷ್ಟ್ರೀಯ ಸಹಕಾರ, ಆಧುನಿಕ ವೈದ್ಯಕೀಯ ಸೌಲಭ್ಯಗಳು ಹಾಗೂ ವಸತಿ ವ್ಯವಸ್ಥೆಯೊಂದಿಗೆ ವಿಶ್ವಮಟ್ಟದ ಶಿಕ್ಷಣ ವ್ಯವಸ್ಥೆ ರೂಪಿಸಲಾಗುತ್ತಿದೆ.
ಇಲ್ಲಿ ಪದವಿ, ಸ್ನಾತಕೋತ್ತರ, ಫೆಲೋಶಿಪ್ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ನೀಡಲಾಗುತ್ತದೆ. ವನ್ಯಜೀವಿ ವೈದ್ಯಕೀಯ, ಶಸ್ತ್ರಚಿಕಿತ್ಸೆ, ಪೌಷ್ಟಿಕಾಂಶ, ವರ್ತನಾ ವಿಜ್ಞಾನ, ತಳಿಶಾಸ್ತ್ರ, ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಂರಕ್ಷಣಾ ನೀತಿ ಮುಂತಾದ ವಿಷಯಗಳಲ್ಲಿ ವಿಶೇಷ ಶಿಕ್ಷಣ ನೀಡಲಾಗುವುದು.

ಸಂಶೋಧನೆಗೆ ಆದ್ಯತೆ

ಸುಧಾರಿತ ಶೈಕ್ಷಣಿಕ ಹಾಗೂ ವೈದ್ಯಕೀಯ ಮೂಲಸೌಕರ್ಯಗಳೊಂದಿಗೆ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಅಂತಾರಾಷ್ಟ್ರೀಯ ಸಹಯೋಗದ ಮೂಲಕ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಅನುಭವ ಕಲ್ಪಿಸಲಾಗುವುದು.
ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು “ಎ ಲೈಫ್ ಮ್ಯಾಟರ್ಸ್‌” ಎಂಬ ವಿದ್ಯಾರ್ಥಿ ವೇತನವನ್ನು ಸಂಸ್ಥೆ ಘೋಷಿಸಿದೆ.

ಸಾಂಪ್ರದಾಯಿಕ ಶಿಲಾನ್ಯಾಸ

ವಿಶ್ವವಿದ್ಯಾನಿಲಯದ ಶಿಲಾನ್ಯಾಸ ಕಾರ್ಯಕ್ರಮವನ್ನು ದೇಶದ ವಿವಿಧ ಜೀವವೈವಿಧ್ಯ ಪ್ರದೇಶಗಳಿಂದ ಸಂಗ್ರಹಿಸಿದ ಮಣ್ಣು, ನೀರು ಮತ್ತು ಕಲ್ಲುಗಳನ್ನು ಬಳಸಿಕೊಂಡು ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು. ಹಿಂದೂ ಸಂಪ್ರದಾಯದಂತೆ ನಡೆದ ಈ ಸಮಾರಂಭದಲ್ಲಿ ಶಿಕ್ಷಣ, ವಿಜ್ಞಾನ ಹಾಗೂ ವನ್ಯಜೀವಿ ಸಂರಕ್ಷಣ ಕ್ಷೇತ್ರದ ಗಣ್ಯರು ಭಾಗವಹಿಸಿದರು.

ಗುಜರಾತ್‌ನ ಜಾಮ್‌ನಗರದಲ್ಲಿರುವ ವನತಾರಾ ಯೋಜನೆಯ ಮುಂದುವರಿದ ಭಾಗವಾಗಿ ಈ ವಿಶ್ವವಿದ್ಯಾನಿಲಯ ಸ್ಥಾಪನೆಯಾಗುತ್ತಿದ್ದು, ಅರಣ್ಯ ಪರಿಸರ, ಪ್ರಯೋಗಾಲಯಗಳು ಹಾಗೂ ಮಾನವ ಮನಸ್ಸಿನಲ್ಲಿಯೂ ಸಂರಕ್ಷಣೆಯ ಭವಿಷ್ಯ ರೂಪುಗೊಳ್ಳಬೇಕು ಎಂಬ ದಿಟ್ಟ ದೃಷ್ಟಿಕೋನವನ್ನು ಹೊಂದಿದೆ.

Advertisement

LEAVE A REPLY

Please enter your comment!
Please enter your name here