
ತಿರುವನಂತಪುರಂ, ಮಾ. 31: ಕೇರಳದಲ್ಲಿ ಯುಡಿಎಫ್ ಅಧಿಕಾರಕ್ಕೇರಿದರೆ ಕರ್ನಾಟಕ ಮತ್ತು ತೆಲಂಗಾಣ ಮಾದರಿಯಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. ಇದೇ ವೇಳೆ, ರಾಜ್ಯದಲ್ಲಿ ಮಹಿಳೆಯೊಬ್ಬರು ಮುಖ್ಯಮಂತ್ರಿಯಾಗಬೇಕು ಎಂಬ ತಮ್ಮ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.
ಪುತ್ತುಪಲ್ಲಿ ಪ್ರದೇಶದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು. ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣ, ಕಾಲೇಜು ವಿದ್ಯಾರ್ಥಿನಿಯರಿಗೆ ತಿಂಗಳಿಗೆ ₹1,000 ಗೌರವಧನ ನೀಡುವ ಯೋಜನೆ ಜಾರಿಗೆ ತರಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಮಹಿಳೆಯರು ತಮಗೆ ನೀಡಿದ ಸ್ಪಂದನೆಗೆ ಉತ್ತೇಜಿತರಾದ ರಾಹುಲ್ ಗಾಂಧಿ, ಮಹಿಳೆಯರು ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗಬೇಕು ಎಂದು ಕರೆ ನೀಡಿದರು. “ಈ ಬಾರಿ ಕೇರಳದಲ್ಲಿ ಮಹಿಳೆ ಮುಖ್ಯಮಂತ್ರಿಯಾಗುವುದನ್ನು ನೋಡಲು ಬಯಸುತ್ತೇನೆ. ಮಹಿಳೆಯರ ಆಶೋತ್ತರಗಳನ್ನು ಅವರು ಸ್ವತಃ ಈಡೇರಿಸಿಕೊಳ್ಳಲು ಅಧಿಕಾರಕ್ಕೆ ಬರಬೇಕು” ಎಂದು ಹೇಳಿದರು.
ಕೇರಳದಲ್ಲಿ ಕೆ.ಆರ್. ಗೌರಿ ಅಮ್ಮ ಅವರಂತಹ ಪ್ರಭಾವಿ ಮಹಿಳಾ ನಾಯಕಿಯರ ಪರಂಪರೆ ಇದೆ ಎಂದು ಅವರು ಉಲ್ಲೇಖಿಸಿದರು. ಕಾಂಗ್ರೆಸ್ 92 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಅದರಲ್ಲಿ 9 ಕ್ಷೇತ್ರಗಳನ್ನು ಮಹಿಳೆಯರಿಗೆ ನೀಡಲಾಗಿದೆ. ಮುಸ್ಲಿಂ ಲೀಗ್ ಪಕ್ಷವು ಸಹ ಎರಡು ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಸಭೆಯ ನಂತರ ರಾಹುಲ್ ಗಾಂಧಿ ಸೈಕಲ್ ತುಳಿಯುತ್ತಾ ರ್ಯಾಲಿ ನಡೆಸಿದರು. ಇದೇ ತಿಂಗಳ ಮಾರ್ಚ್ 8ರಂದು ನಡೆದ ಪ್ರಚಾರ ಸಭೆಯಲ್ಲೂ ಯುಡಿಎಫ್ ಸರ್ಕಾರ ಬಂದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಘೋಷಿಸಿದ್ದರು.
ಆ ಐದು ಗ್ಯಾರಂಟಿಗಳಲ್ಲಿ ಮಹಿಳೆಯರಿಗೆ ಉಚಿತ ಸಾರಿಗೆ, ವಿದ್ಯಾರ್ಥಿನಿಯರಿಗೆ ಮಾಸಿಕ ₹1,000, ಬಡ ಕುಟುಂಬಗಳಿಗೆ ₹3,000 ಪಿಂಚಣಿ, ₹25 ಲಕ್ಷ ಆರೋಗ್ಯ ವಿಮೆ ಮತ್ತು ವ್ಯವಹಾರ ಆರಂಭಕ್ಕೆ ₹5 ಲಕ್ಷವರೆಗೆ ಬಡ್ಡಿರಹಿತ ಸಾಲ ನೀಡುವ ಯೋಜನೆಗಳು ಸೇರಿವೆ.





