
ಬೆಂಗಳೂರು, ಮಾ.23: ಇತ್ತೀಚೆಗೆ ತೆರೆಗೆ ಬಂದಿರುವ ‘ಲವ್ ಮಾಕ್ಟೇಲ್-3’ ಸಿನಿಮಾ ಸಕ್ಸೆಸ್‌ನ ಹಾದಿಯಲ್ಲಿ ಸಾಗುತ್ತಿರುವಾಗಲೇ, ಚಿತ್ರದ ಮೇಲೆ ಕಥೆ ಕಳ್ಳತನದ ಗಂಭೀರ ಆರೋಪ ಕೇಳಿಬಂದಿದ್ದು ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ವಿರುದ್ಧ ಬರಹಗಾರ ರಾಘವೇಂದ್ರ ಎಂ. ನಾಯಕ್ ಸ್ಫೋಟಕ ಆರೋಪ ಮಾಡಿದ್ದು, ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
“ನನ್ನ ಕಥೆಯ ದ್ವಿತೀಯಾರ್ಧವನ್ನು ಬಳಸಿಕೊಂಡು ಸಿನಿಮಾ ಮಾಡಿದ್ದಾರೆ” ಎಂದು ಆರೋಪಿಸಿರುವ ರಾಘವೇಂದ್ರ ನಾಯಕ್, ತಮ್ಮ ಕಥೆಯನ್ನು ಸೂಕ್ತ ದಾಖಲೆಗಳಿಲ್ಲದೆ ಹಂಚಿಕೊಂಡಿದ್ದರಿಂದ ತಮಗೆ ಅನ್ಯಾಯವಾಗಿದೆಯೆಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಹೊಸ ಬರಹಗಾರರು ತಮ್ಮ ಕಥೆಗಳನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಇದಷ್ಟೇ ಅಲ್ಲದೆ, ಈ ಕಥೆಯ ನರೇಷನ್ ಡಾರ್ಲಿಂಗ್ ಕೃಷ್ಣ ಅವರಿಗೆ ನಿರ್ಮಾಪಕ ಗುರು ದೇಶಪಾಂಡೆ ಅವರ ಸಮ್ಮುಖದಲ್ಲೇ ನೀಡಲಾಗಿತ್ತು ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ. “ಚಿತ್ರದಲ್ಲಿ ಇಂಟರ್ವಲ್ ಬ್ಲಾಕ್, ಕ್ಲೈಮ್ಯಾಕ್ಸ್ ಸೇರಿದಂತೆ ಹಲವು ಭಾಗಗಳು ನಮ್ಮ ಕಥೆಯನ್ನು ಹೋಲುತ್ತವೆ” ಎಂದು ಅವರು ಆರೋಪಿಸಿದ್ದಾರೆ.
ಈ ವಿಚಾರವಾಗಿ ಪ್ರಶ್ನಿಸಿದಾಗ, “ಆ ಕಥೆ ನನಗೆ ನೆನಪಿಲ್ಲ” ಎಂದು ಡಾರ್ಲಿಂಗ್ ಕೃಷ್ಣ ಪ್ರತಿಕ್ರಿಯೆ ನೀಡಿದರೆಂದು ಹೇಳಲಾಗುತ್ತಿದೆ. ಆದರೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಗುರು ದೇಶಪಾಂಡೆ, “ಹಳೆಯ ಘಟನೆಗಳನ್ನು ನೆನಪಿಟ್ಟುಕೊಳ್ಳುವವರು, ಎರಡು ವರ್ಷದ ಹಿಂದಿನ ಕಥೆಯನ್ನು ಮರೆಯುವುದು ಅಸಾಧ್ಯ” ಎಂದು ಕಿಡಿಕಾರಿದ್ದಾರೆ.
ಚಿತ್ರದಲ್ಲಿರುವ ಕೆಲವು ಕಾನೂನು ಸಂಬಂಧಿತ ಅಂಶಗಳಿಗೂ ಲಾಜಿಕ್ ಇಲ್ಲ ಎಂದು ರಾಘವೇಂದ್ರ ನಾಯಕ್ ವಾದಿಸಿದ್ದು, “ನಮ್ಮ ಕಥೆಯ ಭಾವನಾತ್ಮಕ ಅಂಶಗಳನ್ನು ಬಳಸಿಕೊಂಡು ತಾಂತ್ರಿಕ ಅಂಶಗಳನ್ನು ಕಡೆಗಣಿಸಲಾಗಿದೆ” ಎಂದು ಹೇಳಿದ್ದಾರೆ.
“ನಮಗೆ ಹಣ ಅಥವಾ ಪ್ರಚಾರ ಮುಖ್ಯವಲ್ಲ. ಎಂಟು ತಿಂಗಳ ಶ್ರಮಕ್ಕೆ ಕನಿಷ್ಠ ಗೌರವ ಸಿಗಬೇಕು” ಎಂಬ ಅವರ ಮಾತು ಇದೀಗ ಚರ್ಚೆಗೆ ಕಾರಣವಾಗಿದೆ. ಇದೇ ಕಥೆಯನ್ನು ನಟರಾದ ಶರಣ್ ಮತ್ತು ರಮೇಶ್ ಅರವಿಂದ್ ಅವರಿಗೂ ವಿವರಿಸಲಾಗಿತ್ತು ಎಂಬ ಮಾಹಿತಿಯೂ ಹೊರಬಂದಿದೆ.
ಈ ನಡುವೆ, ‘ಲವ್ ಮಾಕ್ಟೇಲ್-3’ ತಂಡದಿಂದ ಇನ್ನೂ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಈ ಹಸಿಬಿಸಿ ವಿವಾದಕ್ಕೆ ಡಾರ್ಲಿಂಗ್ ಕೃಷ್ಣ ಯಾವ ರೀತಿಯಲ್ಲಿ ಉತ್ತರ ನೀಡಲಿದ್ದಾರೆ ಎಂಬುದನ್ನು ಕಾದುನೋಡಲಾಗುತ್ತಿದೆ.





