
ಬೆಂಗಳೂರು, ಫೆ.19: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಜಾರಿಯಲ್ಲಿದ್ದ ‘ನಲಿ-ಕಲಿ’ ಬೋಧನಾ ಕಾರ್ಯಕ್ರಮವನ್ನು ರಾಜ್ಯದ 15 ಜಿಲ್ಲೆಗಳಲ್ಲಿ ಕೈಬಿಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತೀರ್ಮಾನಿಸಿದೆ. ಈ ನಿರ್ಧಾರ ಶಿಕ್ಷಣ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಶಿಕ್ಷಕರು ಹಾಗೂ ಶಿಕ್ಷಣ ತಜ್ಞರಿಂದ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಯೋಜನೆ ರದ್ದುಪಡಿಸಿರುವುದನ್ನು ದೃಢಪಡಿಸಿದ್ದಾರೆ. “1ನೇ ತರಗತಿಯಿಂದ ಕನ್ನಡ–ಇಂಗ್ಲಿಷ್ ದ್ವಿಭಾಷಾ ಪಾಠಕ್ರಮ ಜಾರಿಯಾಗಲಿದೆ. ಹಿಂದಿನಂತೆ ಕೇವಲ ಕನ್ನಡ ಮಾಧ್ಯಮವಲ್ಲದೆ ಹೊಸ ಬೋಧನಾ ವಿಧಾನವನ್ನು ಅಳವಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 15 ಜಿಲ್ಲೆಗಳಲ್ಲಿ ನಲಿ-ಕಲಿ ಯೋಜನೆ ರದ್ದುಪಡಿಸಲಾಗಿದೆ,” ಎಂದು ಅವರು ತಿಳಿಸಿದ್ದಾರೆ.
ಶಾಲಾ ಶಿಕ್ಷಣ ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್ ಕೂಡ ಈ ನಿರ್ಧಾರವನ್ನು ದೃಢಪಡಿಸಿ, “ಮುಂದಿನ ಶೈಕ್ಷಣಿಕ ವರ್ಷದಿಂದ 1ರಿಂದ 3ನೇ ತರಗತಿಗಳಿಗೆ ಮೋನೋಗ್ರೇಡಿಂಗ್ ವ್ಯವಸ್ಥೆ ಜಾರಿಯಾಗಲಿದೆ,” ಎಂದು ಹೇಳಿದ್ದಾರೆ.
ಶಿಕ್ಷಕರ ಕೊರತೆಯಿರುವ ಶಾಲೆಗಳಲ್ಲಿ ಒಂದೇ ತರಗತಿಯಲ್ಲಿ ಹಲವು ತರಗತಿಗಳ ಮಕ್ಕಳಿಗೆ ಪಾಠ ಕಲಿಸುವ ಉದ್ದೇಶದಿಂದ ನಲಿ-ಕಲಿ ಕಾರ್ಯಕ್ರಮವನ್ನು ಆರಂಭಿಸಲಾಗಿತ್ತು. ಇದೀಗ ಹೆಚ್ಚಿನ ಶಿಕ್ಷಕರ ನೇಮಕಾತಿ ಮಾಡುವ ನಿರ್ಧಾರ ಕೈಗೊಳ್ಳಲಾಗಿರುವುದರಿಂದ ಈ ಯೋಜನೆಯನ್ನು ಕೈಬಿಡಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಈ ಬದಲಾವಣೆಯಿಂದ ಬೋಧನಾ ಗುಣಮಟ್ಟದಲ್ಲಿ ಏರಿಕೆಯಾಗಲಿದಲಿಯೇ, ಗ್ರಾಮೀಣ ಪ್ರದೇಶಗಳ ಶಾಲೆಗಳಿಗೆ ಇದರಿಂದ ಲಾಭವಾಗುತ್ತದೆಯೇ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.





