ಟಿ20 ವಿಶ್ವಕಪ್‌ಗೆ ಭಾರತ ಸಾರಥ್ಯ; ಟೂರ್ನಿಯಿಂದ ಹೊರಬಂದ ಬಾಂಗ್ಲಾದೇಶ!

0
26
Advertisement

ನವದೆಹಲಿ ಜ.22: ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಿಂದ ಬಾಂಗ್ಲದೇಶ ಹೊರಬಂದಿದ್ದು, ಭದ್ರತೆಯ ನೆಪವನ್ನಿರಿಸಿ ಭಾರತದಲ್ಲಿ ಆಡುವುದಿಲ್ಲ ಎಂದಿದೆ. ನಿನ್ನೆ ಐಸಿಸಿಯು ವಿವಾದ ಪರಿಹಾರಕ್ಕಾಗಿ 24 ಗಂಟೆಗಳ ಕಾಲಾವಕಾಶ ನೀಡಿದ್ದಕ್ಕೆ ಪ್ರತಿಯಾಗಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಿದೆ.

ಬಾಂಗ್ಲಾದೇಶ ತಂಡ ಪಂದ್ಯಾವಳಿಯಿಂದ ಹೊರಗುಳಿದಲ್ಲಿ, ಫೆಬ್ರವರಿ 7ರಂದು ಆರಂಭಗೊಳ್ಳಲಿರುವ ಟೂರ್ನಿಗೆ ಮುನ್ನವೇ ಸ್ಕಾಟ್ಲೆಂಡ್ ಅನ್ನು ಬದಲಿಯಾಗಿ ಸೇರಿಸಲಾಗುವುದು ಎಂದು ಐಸಿಸಿ ಸ್ಪಷ್ಟಪಡಿಸಿದೆ.

ಈ ಮಹತ್ವದ ವಿಷಯದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಐಸಿಸಿಯು 12 ಪೂರ್ಣ ಸದಸ್ಯ ಕ್ರಿಕೆಟ್ ರಾಷ್ಟ್ರಗಳು ಹಾಗೂ ನಾಲ್ಕು ಸಹವರ್ತಿ ರಾಷ್ಟ್ರಗಳ ಪ್ರತಿನಿಧಿಗಳ ಸಭೆಯನ್ನು ಕರೆದಿತ್ತು. ಐಸಿಸಿಯ ಭ್ರಷ್ಟಾಚಾರ ನಿರೋಧಕ ಘಟಕದ ಅಧ್ಯಕ್ಷರೂ ಸಭೆಯಲ್ಲಿ ಪಾಲ್ಗೊಂಡಿದ್ದರು. ಚರ್ಚೆಯ ಬಳಿಕ 14–2 ಮತಗಳ ಬಹುಮತದೊಂದಿಗೆ, ಟಿ20 ವಿಶ್ವಕಪ್ ಅನ್ನು ನಿಗದಿಯಂತೆ ನಡೆಸುವ ತೀರ್ಮಾನಕ್ಕೆ ಬರಲಾಯಿತು. ಈ ನಿರ್ಧಾರದೊಂದಿಗೆ, ವಿಶ್ವಕಪ್ ಪಂದ್ಯಗಳನ್ನು ಬೇರೆ ದೇಶಕ್ಕೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಬೇಡಿಕೆಯನ್ನು ಐಸಿಸಿ ಸಂಪೂರ್ಣವಾಗಿ ತಿರಸ್ಕರಿಸಿತು.

ಈ ತೀರ್ಮಾನವನ್ನು ತನ್ನ ಸರ್ಕಾರಕ್ಕೆ ತಿಳಿಸಿ, 24 ಗಂಟೆಗಳೊಳಗೆ ಅಂತಿಮ ನಿರ್ಧಾರವನ್ನು ತಿಳಿಸುವಂತೆ ಐಸಿಸಿ ಬಾಂಗ್ಲಾದೇಶಕ್ಕೆ ಸೂಚನೆ ನೀಡಿತ್ತು. ಇದರ ಹಿನ್ನೆಲೆ ಬಾಂಗ್ಲಾದೇಶದಲ್ಲಿ ಆಟಗಾರರು, ತಾಂತ್ರಿಕ ಸಲಹೆಗಾರರು ಹಾಗೂ ಸರ್ಕಾರಿ ಪ್ರತಿನಿಧಿಗಳೊಂದಿಗೆ ದೀರ್ಘ ಸಭೆ ನಡೆಸಲಾಯಿತು. ಸಭೆಯ ನಂತರ, ಮುಂದಿನ ತಿಂಗಳು ನಡೆಯುವ ಟಿ20 ವಿಶ್ವಕಪ್ ನಲ್ಲಿ ಬಾಂಗ್ಲಾದೇಶ ಭಾಗವಹಿಸುವುದಿಲ್ಲ ಎಂದು ಬಿಸಿಬಿ ಪ್ರಕಟಿಸಿದೆ.

ಬಾಂಗ್ಲಾದೇಶ ಸರ್ಕಾರದ ಯುವ ಮತ್ತು ಕ್ರೀಡಾ ಸಲಹೆಗಾರ ಅಮೀನುಲ್ ಇಸ್ಲಾಂ ಅವರು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ನಮ್ಮ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸುವ ಮನವಿಯನ್ನು ಐಸಿಸಿ ತಿರಸ್ಕರಿಸಿದೆ. ವಿಶ್ವ ಕ್ರಿಕೆಟ್‌ನ ಪ್ರಸ್ತುತ ಸ್ಥಿತಿಗತಿ ಬಗ್ಗೆ ನಮಗೆ ಪೂರ್ಣ ವಿಶ್ವಾಸವಿಲ್ಲ. ಐಸಿಸಿಯೊಂದಿಗೆ ಸಂವಹನ ಮುಂದುವರಿಸುತ್ತೇವೆ. ವಿಶ್ವಕಪ್ ಆಡಲು ನಾವು ಬಯಸುತ್ತೇವೆ; ಆದರೆ ಭಾರತದಲ್ಲಿ ಆಡುವುದಿಲ್ಲ. ನಮ್ಮ ಹೋರಾಟ ಮುಂದುವರಿಯಲಿದೆ,” ಎಂದು ಹೇಳಿದರು.

ಐಸಿಸಿ ಮಂಡಳಿ ಸಭೆಯಲ್ಲಿ ಕೆಲ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಮುಸ್ತಾಫಿಜುರ್ ಸಂಬಂಧಿತ ವಿಚಾರ ಪ್ರತ್ಯೇಕವಾಗಿದ್ದು, ಆ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರ ಭಾರತಕ್ಕೇ ಸೇರಿದೆ ಎಂದು ಅಮೀನುಲ್ ಇಸ್ಲಾಂ ಸ್ಪಷ್ಟಪಡಿಸಿದರು.

Advertisement

LEAVE A REPLY

Please enter your comment!
Please enter your name here