
ಬೆಂಗಳೂರು, ಜ.22: ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿಯಂತೆ, ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ (1930)ಗೆ ಬಂದ ಕರೆಗಳ ಸಂಖ್ಯೆ ಕಳೆದ ನಾಲ್ಕು ವರ್ಷಗಳಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಕರ್ನಾಟಕ ಪೊಲೀಸ್ ಇಲಾಖೆಯ ಅಂಕಿಅಂಶಗಳ ಪ್ರಕಾರ, 2022ರಲ್ಲಿ1.3 ಲಕ್ಷವಾಗಿದ್ದ ಕರೆಗಳ ಸಂಖ್ಯೆ 2025ರಲ್ಲಿ 24 ಲಕ್ಷದ ಗಡಿ ದಾಟಿದೆ.
ಅಧಿಕೃತ ದಾಖಲೆಗಳಂತೆ, 2022ರಲ್ಲಿ ರಾಜ್ಯದಾದ್ಯಂತ 1,30,330 ಮಂದಿ ಸೈಬರ್ ಅಪರಾಧ ಪೀಡಿತರು ಸಹಾಯವಾಣಿಗೆ ಕರೆ ಮಾಡಿದ್ದಾರೆ. ಈ ಸಂಖ್ಯೆ 2023ರಲ್ಲಿ 4,67,258ಕ್ಕೆ ಏರಿಕೆಯಾದರೆ, 2024ರಲ್ಲಿ 10,79,458 ಕರೆಗಳು ದಾಖಲಾಗಿವೆ. 2025ರಲ್ಲಿ ದಾಖಲೆ ಮಟ್ಟದ 24,08,475 ಕರೆಗಳು ಬಂದಿವೆ.
ಅಪರಾಧ ನಡೆದ ತಕ್ಷಣ, ಅಂದರೆ 60ರಿಂದ 90 ನಿಮಿಷಗಳ ಒಳಗೆ (‘ಗೋಲ್ಡನ್ ಹವರ್) ಸಹಾಯವಾಣಿಗೆ ಕರೆ ಮಾಡಿದಲ್ಲಿ, ಶಂಕಿತರ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ತಡೆಹಿಡಿಯುವ ಸಾಧ್ಯತೆ ಬಹಳಷ್ಟು ಹೆಚ್ಚುತ್ತದೆ ಎಂದು ಪೊಲೀಸ್ ಮಹಾನಿರ್ದೇಶಕ ಹಾಗೂ ಮಹಾನಿರೀಕ್ಷಕ (ಡಿಜಿ–ಐಜಿಪಿ) ಎಂ.ಎ. ಸಲೀಂ ತಿಳಿಸಿದ್ದಾರೆ.
“ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ 1930 ಡಿಸೆಂಬರ್ 2021ರಿಂದ ಕಾರ್ಯಾರಂಭ ಮಾಡಿದೆ. ಸೈಬರ್ ಅಪರಾಧದ ಪೀಡಿತರು ವಿಳಂಬವಿಲ್ಲದೆ ಈ ಸಂಖ್ಯೆಗೆ ಕರೆ ಮಾಡಿ, ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ದೂರು ನೀಡಲು ತಡವಾದರೆ, ದುಷ್ಕರ್ಮಿಗಳು ಮೂಲ್ ಬ್ಯಾಂಕ್ ಖಾತೆಗಳ (Mule Bank Accounts) ಮೂಲಕ ಹಣವನ್ನು ಹಿಂಪಡೆಯಲು ಅವಕಾಶ ಸಿಗುತ್ತದೆ,” ಎಂದು ಅವರು ಹೇಳಿದ್ದಾರೆ.
2025ರಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಲು ಎರಡು ಪ್ರಮುಖ ಕಾರಣಗಳಿವೆ. ಸಾರ್ವಜನಿಕರಲ್ಲಿ ಹೆಚ್ಚಿದ ಜಾಗೃತಿ ಹಾಗೂ ಶಂಕಿತರ ಮೊಬೈಲ್ ಸಂಖ್ಯೆಗಳ ನಿಷ್ಕ್ರಿಯಗೊಳಿಸುವಂತಹ ಕಟ್ಟುನಿಟ್ಟಿನ ಪೊಲೀಸ್ ಕ್ರಮಗಳು ಇದರ ಹಿಂದೆ ಪ್ರಮುಖ ಪಾತ್ರವಹಿಸಿವೆ ಎಂದು ಅವರು ವಿವರಿಸಿದ್ದಾರೆ.
ಆದರೆ ಸಹಾಯವಾಣಿಗೆ ಕರೆಗಳ ಸಂಖ್ಯೆ ಹೆಚ್ಚಿದರೂ, ಪೀಡಿತರಿಂದ ತಕ್ಷಣದ ಪ್ರತಿಕ್ರಿಯೆ ಇನ್ನೂ ಸಮರ್ಪಕ ಮಟ್ಟಕ್ಕೇರಿಲ್ಲ ಎಂಬುದು ಅಂಕಿಅಂಶಗಳಿಂದ ತಿಳಿದುಬರುತ್ತಿದೆ. 2022ರಲ್ಲಿ ರಾಜ್ಯದಲ್ಲಿ ಸೈಬರ್ ಅಪರಾಧಗಳಿಂದ ಉಂಟಾದ ಒಟ್ಟು ನಷ್ಟ ₹113 ಕೋಟಿಯಾಗಿದ್ದು, ಅದರಲ್ಲಿ ಕೇವಲ ₹8 ಕೋಟಿಯನ್ನು ಮಾತ್ರ ಪೊಲೀಸರು ಸ್ಥಗಿತಗೊಳಿಸಲು ಸಾಧ್ಯವಾಯಿತು.





