ಸರಕಾರಿ ಶಾಲಾ ಮಕ್ಕಳ ದಾಖಲಾತಿ ಕುಸಿತ; ಮಕ್ಕಳನ್ನು ಸೆಳೆಯಲು ಉಚಿತದ ಆಮೀಷ!

0
16
Advertisement

ಬೆಂಗಳೂರು, ಜ.16: ಖಾಸಗಿ ಶಾಲೆಗಳ ಹೆಚ್ಚಳ ಸೇರಿದಂತೆ ಹಲವು ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದೆ. ಈ ಆತಂಕಕಾರಿ ಸ್ಥಿತಿಯನ್ನು ತಡೆಗಟ್ಟಲು ಶಿಕ್ಷಣ ಇಲಾಖೆ ಹರಸಾಹಸ ಪಡುತ್ತಿದ್ದು, ಉಚಿತದ ಮೊರೆ ಹೋಗಿದೆ.

ಒಂದೇ ವರ್ಷದಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ ಸುಮಾರು 2.25 ಲಕ್ಷದಷ್ಟು ಕುಸಿತಗೊಂಡಿರುವುದು ಗಂಭೀರ ಪ್ರಶ್ನೆಗಳಿಗೆ ಕಾರಣವಾಗಿದ್ದು, ಇದರಿಂದ ಇಲಾಖೆ ಅಲರ್ಟ್ ಆಗಿದೆ. ಈಗಾಗಲೇ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಶೂ, ಬಟ್ಟೆ ಹಾಗೂ ಮಧ್ಯಾಹ್ನದ ಊಟ ಒದಗಿಸಲಾಗುತ್ತಿದೆ. ಇದರ ಜೊತೆಗೆ, ಮುಂದಿನ ದಿನಗಳಲ್ಲಿ ಪ್ರತಿ ವಿದ್ಯಾರ್ಥಿಗೆ ಆರು ನೋಟ್‌ಬುಕ್‌ಗಳನ್ನು ಉಚಿತವಾಗಿ ನೀಡಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.

ಇದಷ್ಟೇ ಅಲ್ಲದೆ, ವಿದ್ಯಾರ್ಥಿಗಳ ಪೌಷ್ಟಿಕತೆಯ ದೃಷ್ಟಿಯಿಂದ ವಾರಕ್ಕೆ ಐದು ದಿನ ಮೊಟ್ಟೆ ವಿತರಣೆ ಮಾಡುವ ಯೋಜನೆಯನ್ನೂ ಜಾರಿಗೆ ತರಲು ಮುಂದಾಗಿದೆ. ಜನವರಿಯಿಂದಲೇ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಯಾವುದೇ ಶುಲ್ಕವಿಲ್ಲ ಎಂಬುದನ್ನು ಪಾಲಕರಿಗೆ ಮನವರಿಕೆ ಮಾಡಲು ಶಿಕ್ಷಣ ಇಲಾಖೆ ವಿಶೇಷ ಕ್ಯಾಂಪೇನ್‌ಗೂ ಚಾಲನೆ ನೀಡಿದೆ.

ವಿಧಾನಪರಿಷತ್ ಅಧಿವೇಶನದಲ್ಲಿ ರಾಜ್ಯ ಸರ್ಕಾರ ನೀಡಿದ ಮಾಹಿತಿಯಂತೆ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ 188 ಸರ್ಕಾರಿ ಶಾಲೆಗಳಲ್ಲಿ ಒಂದೂ ದಾಖಲಾತಿ ಆಗಿಲ್ಲ ಎಂಬುದು ಬಹಿರಂಗವಾಗಿದೆ. ಈ ಪೈಕಿ 160 ಕಿರಿಯ ಪ್ರಾಥಮಿಕ ಶಾಲೆಗಳು, 25 ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ 3 ಪ್ರೌಢಶಾಲೆಗಳು ಸೇರಿವೆ.

ಜಿಲ್ಲಾವಾರು ಅಂಕಿ-ಅಂಶಗಳ ಪ್ರಕಾರ, ಶೂನ್ಯ ದಾಖಲಾತಿ ಹೊಂದಿರುವ ಶಾಲೆಗಳು ತುಮಕೂರು ಜಿಲ್ಲೆಯಲ್ಲಿ 45, ಕಲಬುರಗಿ 21, ಕೋಲಾರ 20, ಕೊಪ್ಪಳ 18 ಹಾಗೂ ಬೀದರ್ ಜಿಲ್ಲೆಯಲ್ಲಿ 17 ಶಾಲೆಗಳಿವೆ ಎಂದು ತಿಳಿದುಬಂದಿದೆ.

ಸರ್ಕಾರಿ ಶಾಲೆಗಳ ಮೇಲಿನ ನಂಬಿಕೆಯನ್ನು ಪುನರ್‌ಸ್ಥಾಪಿಸಿ, ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆ ಕೈಗೊಂಡಿರುವ ಈ ಹೊಸ ಕ್ರಮಗಳು ಫಲಕಾರಿಯಾಗಲಿವೆಯೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

Advertisement

LEAVE A REPLY

Please enter your comment!
Please enter your name here