
ಬೆಂಗಳೂರು, ಜ.14.: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2025ರಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, 2025ರಲ್ಲಿ ಒಟ್ಟು 4.3 ಕೋಟಿ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಬಳಸಿಕೊಂಡಿದ್ದಾರೆ. 2024ಕ್ಕೆ ಹೋಲಿಸಿದರೆ ಶೇಕಡಾ 8ರಷ್ಟು ಹೆಚ್ಚಳವಾಗಿದೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಹೆಚ್ಚಿದಂತೆ, ಸರಕು ಸಾಗಣೆಯಲ್ಲೂ ಉತ್ತಮ ಬೆಳವಣಿಗೆ ಕಂಡುಬಂದಿದೆ.
ಒಟ್ಟು ಪ್ರಯಾಣಿಕರಲ್ಲಿ 28.7 ಶೇಕಡಾ ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಿದ್ದು, ಅಂತಾರಾಷ್ಟ್ರೀಯ ವಿಮಾನಗಳ ನಿರ್ಗಮನ ಸಂಖ್ಯೆ 38ರಿಂದ 51ಕ್ಕೆ ಏರಿಕೆಯಾಗಿದೆ. ಜೊತೆಗೆ ವಿಮಾನ ನಿಲ್ದಾಣವು 5 ದೇಶೀಯ ಮತ್ತು 5 ಅಂತಾರಾಷ್ಟ್ರೀಯ ಸೇರಿ ಒಟ್ಟು 10 ಹೊಸ ಮಾರ್ಗಗಳನ್ನು ಆರಂಭಿಸಿದೆ.
ನವೆಂಬರ್ 23, 2025ರಂದು ಒಂದೇ ದಿನ 1,37,317 ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಸಂಚರಿಸಿದ್ದಾರೆ. ಅಕ್ಟೋಬರ್ 19ರಂದು ಗರಿಷ್ಠ 837 ಏರ್ ಟ್ರಾಫಿಕ್ ಮೂವ್‌ಮೆಂಟ್‌ಗಳು ದಾಖಲಾಗಿದ್ದು, ಒಟ್ಟು 5,20,985 ಟನ್ ಸರಕು ನಿರ್ವಹಣೆ ಮಾಡಲಾಗಿದೆ.
ಪ್ರಯಾಣಿಕ ಸ್ನೇಹಿ ಸೌಲಭ್ಯ, ತಂತ್ರಜ್ಞಾನ ಬಳಕೆ ಹಾಗೂ ಕಾರ್ಯಕ್ಷಮತೆಯ ಮಾನದಂಡಗಳಲ್ಲಿ ಉತ್ಕೃಷ್ಟತೆ ತೋರಿದ ಹಿನ್ನೆಲೆಯಲ್ಲಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿ (ACI)ಯ 3ನೇ ಹಂತದ ಮಾನ್ಯತೆ ಲಭಿಸಿದೆ. ಈ ಗೌರವ ಪಡೆಯುವ ಮೂಲಕ ಕೆಐಎಎಲ್ ದೇಶದಲ್ಲೇ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಎಸಿಐಯು ಪ್ರಯಾಣಿಕರ ಅಭಿಪ್ರಾಯ, ವಿಮಾನ ನಿಲ್ದಾಣದ ಕಾರ್ಯವೈಖರಿ ಹಾಗೂ ಸೌಲಭ್ಯಗಳ ಆಧಾರದ ಮೇಲೆ ಈ ಮಾನ್ಯತೆ ನೀಡುತ್ತದೆ. ಈ ಹಿಂದೆ 1 ಮತ್ತು 2ನೇ ಹಂತದ ಮಾನ್ಯತೆ ಪಡೆದಿದ್ದ ಬೆಂಗಳೂರು ವಿಮಾನ ನಿಲ್ದಾಣ, ಇದೀಗ 3ನೇ ಹಂತ ತಲುಪುವ ಮೂಲಕ ಮತ್ತೊಂದು ಮಹತ್ವದ ಸಾಧನೆ ಮಾಡಿದೆ.





