
ಮೈಸೂರು.ಜ.14: ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಮೈಸೂರಿನಲ್ಲಿ ರಾಜ್ಯ ಮಟ್ಟದ ಯುವ ಸಮಾವೇಶ ಇತ್ತೀಚಿಗೆ ನಡೆಯಿತು. ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಯುವಕರು ಭಾಗವಹಿಸಿ, ವ್ಯಸನಮುಕ್ತ ಹಾಗೂ ಬಲಿಷ್ಠ ಕರ್ನಾಟಕ ನಿರ್ಮಾಣಕ್ಕೆ ಸಂಕಲ್ಪ ವ್ಯಕ್ತಪಡಿಸಿದರು.
ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೆಆರ್‌ಎಸ್ ಪಕ್ಷದ ಗೌರವಾಧ್ಯಕ್ಷ ರವಿ ಕೃಷ್ಣಾರೆಡ್ಡಿ, ದೇಶ ನಿರ್ಮಾಣದಲ್ಲಿ ಯುವಜನರ ಪಾತ್ರ ಅತ್ಯಂತ ಪ್ರಮುಖವಾದದ್ದು ಎಂದು ಹೇಳಿದರು. ಆದರೆ ಇಂದಿನ ಆಡಳಿತ ವ್ಯವಸ್ಥೆಗಳು ಯುವಕರ ಶಕ್ತಿ, ಉತ್ಸಾಹ ಹಾಗೂ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳದೇ ವ್ಯರ್ಥ ಮಾಡುತ್ತಿರುವುದು ದುರಂತಕರ ಸಂಗತಿ ಎಂದು ಟೀಕಿಸಿದರು. ರಾಜ್ಯದಲ್ಲಿನ ಜೆಸಿಬಿ ಪಕ್ಷಗಳು ಯುವಜನತೆಯನ್ನು ವ್ಯಸನಗಳ ದಾಸರನ್ನಾಗಿ ಮಾಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಟುವಾಗಿ ಆಕ್ಷೇಪಿಸಿದರು.
ನಿರುದ್ಯೋಗ ರಾಜ್ಯದ ಅತಿದೊಡ್ಡ ಸಮಸ್ಯೆಯಾಗಿದ್ದು, ಹಿಂದೆ ಜಮೀನ್ದಾರರು ಜೀತದಾಳುಗಳನ್ನು ಇಟ್ಟುಕೊಂಡಿದ್ದಂತೆ ಇಂದು ಸರ್ಕಾರ ಗುತ್ತಿಗೆ ನೌಕರರ ರೂಪದಲ್ಲಿ ಹೊಸ ಜೀತದಾಳು ವ್ಯವಸ್ಥೆಯನ್ನು ನಿರ್ಮಿಸಿದೆ ಎಂದು ಆರೋಪಿಸಿದರು. ರಾಜ್ಯವನ್ನು ಮುನ್ನಡೆಸುವಲ್ಲಿ ಜೆಸಿಬಿ ಪಕ್ಷಗಳು ಸಂಪೂರ್ಣ ವಿಫಲವಾಗಿದ್ದು, ಇಂದಿನ ಯುವಜನತೆ ಕೆಆರ್‌ಎಸ್ ಪಕ್ಷವನ್ನು ಆಶಾಕಿರಣದಂತೆ ನೋಡುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಯುವಕರು ಶಿಸ್ತು, ಶೀಲ ಮತ್ತು ನೈತಿಕತೆಯನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿ, ಎಲ್ಲ ರೀತಿಯ ವ್ಯಸನಗಳಿಂದ ದೂರ ಉಳಿಯುವಂತೆ ಯುವಕರಿಗೆ ಪ್ರಮಾಣವಚನ ಬೋಧಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ದೀಪಕ್ ಸಿ.ಎನ್. ಮಾತನಾಡಿ, ಸದೃಢ ನಾಡು ನಿರ್ಮಾಣದಲ್ಲಿ ಯುವಕರ ಪಾತ್ರ ನಿರ್ಣಾಯಕವಾಗಿದೆ ಎಂದು ಹೇಳಿದರು. ಆದರೆ ಇದುವರೆಗೂ ಆಡಳಿತ ನಡೆಸಿದ ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯದಂತಹ ಮೂಲಭೂತ ಅಗತ್ಯಗಳಿಂದ ಯುವಜನತೆಯನ್ನು ವಂಚಿಸಿ, ಅವರನ್ನು ವ್ಯಸನಗಳ ದಾರಿಗೆ ತಳ್ಳಿವೆ ಎಂದು ಆರೋಪಿಸಿದರು. ಸ್ವಾಮಿ ವಿವೇಕಾನಂದರ ಆಶಯದಂತೆ ಬಲಿಷ್ಠ ದೇಶ ಕಟ್ಟಬೇಕಾದರೆ ಬಲಿಷ್ಠ ಯುವಜನತೆ ಅಗತ್ಯವಾಗಿದ್ದು, ಅಂತಹ ದೂರದೃಷ್ಟಿ ಹಾಗೂ ಸ್ಪಷ್ಟ ಯೋಜನೆ ಹೊಂದಿರುವ ಪಕ್ಷ ಕೆಆರ್‌ಎಸ್ ಮಾತ್ರ ಎಂದು ಹೇಳಿದರು.
ಯುವ ಘಟಕದ ಅಧ್ಯಕ್ಷ ಜನನಿ ವತ್ಸಲ ಮಾತನಾಡಿ, ವಿಷಕಾರಿ ವ್ಯವಸ್ಥೆಯ ವಿರುದ್ಧ ಹೋರಾಟ ನಮ್ಮ ಗುರಿಯಾಗಿದೆ ಎಂದು ಹೇಳಿದರು. ಯುವಜನತೆ ಮಾದಕ ವ್ಯಸನಗಳನ್ನು ತ್ಯಜಿಸಿ ನಾಡು ಕಟ್ಟುವ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಸಮಾವೇಶದ ನಂತರ ‘ಡ್ರಗ್ಸ್ ಮುಕ್ತ ಕರ್ನಾಟಕ’ ಜಾಗೃತಿ ಜಾಥಾ ಟೌನ್ ಹಾಲ್‌ನಿಂದ ಆರಂಭವಾಗಿ ಕೆ.ಟಿ. ರಸ್ತೆ, ಉರ್ಸು ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ ಹಾಗೂ 100 ಅಡಿ ರಸ್ತೆ ಮೂಲಕ ಸಾಗಿದ್ದು, ಬಸವೇಶ್ವರ ಪುತ್ಥಳಿ ಬಳಿ ಸಮಾಪ್ತಿಯಾಯಿತು.
ಸಮಾವೇಶದಲ್ಲಿ ಕೆಆರ್‌ಎಸ್ ಪಕ್ಷದ ಗೌರವಾಧ್ಯಕ್ಷ ರವಿ ಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷ ದೀಪಕ್ ಸಿ.ಎನ್., ರಾಜ್ಯ ಉಪಾಧ್ಯಕ್ಷರಾದ ಸೋಮಸುಂದರ್ ಹಾಗೂ ಮಂಜುನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್, ರಾಜ್ಯ ಜಂಟಿ ಕಾರ್ಯದರ್ಶಿ ಎಲ್. ಜೀವನ್, ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ರವಿಕುಮಾರ್, ಯುವ ಘಟಕದ ಅಧ್ಯಕ್ಷ ಜನನಿ ವತ್ಸಲ, ಯುವ ಘಟಕದ ಪ್ರಧಾನ ಕಾರ್ಯದರ್ಶಿ ನಿಖಿಲ್, ರೈತ ಘಟಕದ ಅಧ್ಯಕ್ಷ ಜೋಗನಹಳ್ಳಿ ಗುರುಮೂರ್ತಿ, ಮೈಸೂರು ನಗರ ಘಟಕದ ಅಧ್ಯಕ್ಷ ನಾಗೇಂದ್ರ, ಮೈಸೂರು ಗ್ರಾಮಾಂತರ ಘಟಕದ ಅಧ್ಯಕ್ಷ ರವೀಂದ್ರ, ಎಸ್‌ಸಿ/ಎಸ್‌ಟಿ ಘಟಕದ ರಾಜ್ಯ ಉಪಾಧ್ಯಕ್ಷೆ ಮಹದೇವಮ್ಮ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ಸಾವಿರಾರು ಪಕ್ಷದ ಸೇನಾನಿಗಳು ಉಪಸ್ಥಿತರಿದ್ದರು.




