
ನವದೆಹಲಿ, ಡಿ.26: ಬಡವರು ಹಾಗೂ ಕಾರ್ಮಿಕ ವರ್ಗದ ಹಸಿವು ನೀಗಿಸುವ ಉದ್ದೇಶದಿಂದ ದೆಹಲಿಯ ಬಿಜೆಪಿ ಸರ್ಕಾರ ಮಹತ್ವಾಕಾಂಕ್ಷೆಯ ‘ಅಟಲ್ ಕ್ಯಾಂಟೀನ್’ ಯೋಜನೆಯನ್ನು ಜಾರಿಗೆ ತಂದಿದೆ. ಕರ್ನಾಟಕದ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ರೂಪುಗೊಂಡಿರುವ ಈ ಯೋಜನೆಯಡಿ ಕೇವಲ 5 ರೂಪಾಯಿಗೆ ಪೌಷ್ಟಿಕ ಊಟ ಲಭ್ಯವಾಗಲಿದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನದ ಸ್ಮರಣಾರ್ಥವಾಗಿ ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಗುರುವಾರ ನಗರದ ವಿವಿಧೆಡೆ ಮೊದಲ ಹಂತದಲ್ಲಿ 45 ಕ್ಯಾಂಟೀನ್‌ಗಳನ್ನು ಉದ್ಘಾಟಿಸಿದರು. ಮುಂದಿನ ದಿನಗಳಲ್ಲಿ ನಗರಾದ್ಯಂತ ಒಟ್ಟು 100 ಅಟಲ್ ಕ್ಯಾಂಟೀನ್‌ಗಳು ಕಾರ್ಯಾರಂಭ ಮಾಡಲಿವೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ರೇಖಾ ಗುಪ್ತಾ,“ಅಟಲ್ ಕ್ಯಾಂಟೀನ್ ದೆಹಲಿಯ ಆತ್ಮವಾಗಲಿದೆ. ಯಾರೂ ಹಸಿವಿನಿಂದ ಮಲಗಬಾರದು ಎಂಬುದು ನಮ್ಮ ಗುರಿ. ಇದು ಕೇವಲ ಆಹಾರ ವಿತರಣೆಯಲ್ಲ, ಬಡವರಿಗೆ ಗೌರವಯುತ ಜೀವನ ನೀಡುವ ಪ್ರಯತ್ನ” ಎಂದು ಹೇಳಿದರು.
ಅಟಲ್ ಕ್ಯಾಂಟೀನ್‌ಗಳಲ್ಲಿ ಪ್ರತಿ ದಿನ ಮಧ್ಯಾಹ್ನ 11ರಿಂದ ಸಂಜೆ 4 ಗಂಟೆಯವರೆಗೆ ಹಾಗೂ ರಾತ್ರಿ 6.30ರಿಂದ 9.30ರವರೆಗೆ ಊಟ ವಿತರಿಸಲಾಗುತ್ತದೆ. ಪ್ರತಿ ಕೇಂದ್ರದಲ್ಲಿ ದಿನಕ್ಕೆ ಸರಾಸರಿ 500 ಜನರಿಗೆ ಊಟ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.
ಕೇವಲ 5 ರೂಪಾಯಿಗೆ ನೀಡಲಾಗುವ ಪೌಷ್ಟಿಕ ‘ಥಾಲಿ’ಯಲ್ಲಿ ಅನ್ನ, ಬೇಳೆಸಾರು (ದಾಲ್), ಚಪಾತಿ, ಋತುಮಾನಕ್ಕೆ ತಕ್ಕ ತರಕಾರಿ ಪಲ್ಯ ಹಾಗೂ ಉಪ್ಪಿನಕಾಯಿ ಸೇರಿದ್ದು, ಸಮತೋಲಿತ ಆಹಾರ ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಪಾರದರ್ಶಕತೆ ಮತ್ತು ಶಿಸ್ತು ಕಾಪಾಡುವ ಸಲುವಾಗಿ ಹಳೆಯ ಕೂಪನ್ ವ್ಯವಸ್ಥೆಯನ್ನು ಕೈಬಿಟ್ಟು ಡಿಜಿಟಲ್ ಟೋಕನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಅಲ್ಲದೆ, ಪ್ರತಿಯೊಂದು ಕ್ಯಾಂಟೀನ್‌ನಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ‘ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿ’ ಮೂಲಕ ನೇರ ಮೇಲ್ವಿಚಾರಣೆ ನಡೆಯಲಿದೆ.
ಬಡವರು, ಕೂಲಿ ಕಾರ್ಮಿಕರು ಹಾಗೂ ದಿನಗೂಲಿ ಜೀವಿಗಳಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರ ಒದಗಿಸುವ ಮೂಲಕ ದೆಹಲಿ ಸರ್ಕಾರ ಸಾಮಾಜಿಕ ಹೊಣೆಗಾರಿಕೆಗೆ ಹೊಸ ಆಯಾಮ ನೀಡಿದೆ ಎಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.





