ಶ್ರೀಲಂಕಾದಲ್ಲಿ ಭಾರಿ ಪ್ರವಾಹ; 56 ಮಂದಿ ಸಾವು, ಸರ್ಕಾರಿ ಕಚೇರಿಗಳು, ಶಾಲೆಗಳು ಬಂದ್!

0
53

ಶ್ರೀಲಂಕಾ, ನ.28: ಶ್ರೀಲಂಕಾದಲ್ಲಿ ನಿರಂತರವಾಗಿ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ್ದು, 56 ಮಂದಿ ಸಾವನ್ನಪ್ಪಿದ್ದಾರೆ. 600ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಹವಾಮಾನ ಪರಿಸ್ಥಿತಿ ಹದಗೆಟ್ಟಿರುವುದರಿಂದ, ಸರ್ಕಾರವು ಶುಕ್ರವಾರ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಶಾಲೆಗಳಿಗೆ ರಜಾ ಘೋಷಿಸಿದೆ. ಕಳೆದ ವಾರದಿಂದಲೇ ಮಳೆ ಹಾವಳಿ ತೊಡಗಿದ್ದು, ಗುರುವಾರ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ. ಭಾರಿ ಪ್ರಮಾಣದ ನೀರು ಮನೆ, ಗದ್ದೆ ಮತ್ತು ರಸ್ತೆಗಳಿಗೆ ಹರಿದು ಭೂಕುಸಿತವೂ ಸಂಭವಿಸಿದೆ.

ಚಾ ಬೆಳೆಯುವ ಬದುಲ್ಲ ಮತ್ತು ನುವಾರ ಎಲಿಯಾ ಪ್ರದೇಶಗಳಲ್ಲಿ ಗುರುವಾರ ಭೂಕುಸಿತ ಉಂಟಾಗಿದ್ದು, 25ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಪ್ರದೇಶಗಳು ರಾಜಧಾನಿ ಕೊಲಂಬೊದಿಂದ ಸುಮಾರು 300 ಕಿಲೋಮೀಟರ್ ದೂರದಲ್ಲಿವೆ. ಸರಕಾರದ ವಿಪತ್ತು ನಿರ್ವಹಣಾ ತಂಡದ ಮಾಹಿತಿಯ ಪ್ರಕಾರ, 21 ಮಂದಿ ಕಾಣೆಯಾಗಿದ್ದು, 14 ಮಂದಿಗೆ ಗಾಯಗಳಾಗಿವೆ. ಈ ದೇಶದ ಇತರ ಭಾಗಗಳಲ್ಲಿಯೂ ಭೂಕುಸಿತಗಳಿಂದ ಸಾವು ನೋವು ಸಂಭವಿಸಿದೆ.

ಭಾರೀ ಮಳೆಯಿಂದ ನದಿಗಳು ತುಂಬಿ ಹರಿಯುತ್ತಿವೆ. ಅಧಿಕಾರಿಗಳು ರೈಲೆ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಅಲ್ಲಿನ ಪ್ರಾದೇಶಿಕ ಟಿವಿ ವಾಹಿನಿಯು, ಜಲಾವೃತಗೊಂಡ ಮನೆಯ ಮೇಲ್ಚಾವಣಿಯಲ್ಲಿ ಸಿಲುಕಿದ್ದ 3 ಜನರನ್ನು ವಾಯುಪಡೆಯ ಹೆಲಿಕಾಪ್ಟರ್ ರಕ್ಷಿಸಿರುವುದನ್ನು ಬಿತ್ತರಿಸಿದೆ. ನೌಕಾಪಡೆಯ ನಿಯಂತ್ರಣದಲ್ಲಿರುವ ದೋಣಿಗಳ ಮೂಲಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ಯಲಾಗುತ್ತಿದೆ. ಪೂರ್ವ ಅಂಪಾರದಲ್ಲಿ ಕಾರು ಪ್ರವಾಹ ನೀರಲ್ಲಿ ಕೊಚ್ಚಿಹೋಗಿ 3 ಮಂದಿ ಸಾವನ್ನಪ್ಪಿದ ಘಟನೆ ಕೂಡ ವರದಿಯಾಗಿದೆ.

LEAVE A REPLY

Please enter your comment!
Please enter your name here