
ಮಹೇಶ್ ಶೆಟ್ಟಿ ತಿಮರೋಡಿ ಬಂಧನಕ್ಕೆ ಗೃಹ ಸಚಿವ ಪರಮೇಶ್ವರ್ ಸೂಚನೆ
ಬೆಂಗಳೂರು: ಗೃಹ ಸಚಿವ ಜಿ. ಪರಮೇಶ್ವರ್ ಅವರು ಇಂದು (ಸೋಮವಾರ) ಸಂಜೆಗೂ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarod) ಅವರನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಈ ಕ್ರಮಕ್ಕೆ ಕಾರಣವಾದದ್ದು ತಿಮರೋಡಿ ಅವರು “ಮುಖ್ಯಮಂತ್ರಿಗಳು 24 ಕೊಲೆ ಮಾಡಿದ್ದಾರೆ” ಎಂದು ನೀಡಿದ ವಿವಾದಾತ್ಮಕ ಹೇಳಿಕೆ. ಈ ಹಿನ್ನೆಲೆಯಲ್ಲಿ, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸ್ವತಃ ದೂರವಾಣಿ ಕರೆ ಮಾಡಿದ ಪರಮೇಶ್ವರ್ ಅವರು, ತಕ್ಷಣ ಬಂಧನಕ್ಕೆ ಮುಂದಾಗುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ, “ಸಿಎಂ ವಿರುದ್ಧವೇ ಮಾತನಾಡಿದವನನ್ನು ಸುಮ್ಮನೆ ಬಿಡಬೇಕೇ?” ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.
ವಿಧಾನಸಭೆಯಲ್ಲೂ ಬಿರುಸಿನ ಚರ್ಚೆ
ವಿಧಾನಸಭೆಯಲ್ಲೂ ತಿಮರೋಡಿ ಬಂಧನದ ವಿಚಾರ ಜೋರಾಗಿ ಕೇಳಿಬಂತು.
- ವಿಪಕ್ಷ ನಾಯಕ ಆರ್. ಅಶೋಕ್ ಅವರು, “ಸಿಎಂ ಮೇಲೆ ಕೊಲೆ ಆರೋಪ ಮಾಡಿದ್ದಾನೆ. ಹಾಗಾದರೆ ಸಿಎಂ ಕೊಲೆಗಾರರೇ? ಆರೋಪ ಮಾಡಿದವನ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತದೆಯೇ?” ಎಂದು ಪ್ರಶ್ನಿಸಿದರು.
- ಇದಕ್ಕೆ ಸುರೇಶ್ ಕುಮಾರ್ ಸಹ ಬೆಂಬಲ ವ್ಯಕ್ತಪಡಿಸಿ, “ಸಿಎಂ ವಿರುದ್ಧ ಧೈರ್ಯವಾಗಿ ಆರೋಪ ಮಾಡಿದ್ದಾನೆ, ಸರ್ಕಾರ ಇದನ್ನು ಹೇಗೆ ಸಹಿಸುತ್ತದೆ?” ಎಂದು ಪ್ರಶ್ನಿಸಿದರು.
ಉತ್ತರ ನೀಡಿದ ಪರಮೇಶ್ವರ್, “ಸರ್ಕಾರ ಅಷ್ಟು ‘ಹೆಲ್ಪ್‌ಲೆಸ್’ ಆಗಿಲ್ಲ. ಆ ವ್ಯಕ್ತಿಯ ವಿರುದ್ಧ ಈಗಾಗಲೇ ಹಲವು ಕೇಸುಗಳಿವೆ. ಸಮಾಜದಲ್ಲಿ ಇಂಥವರನ್ನು ಹೀಗೆ ಸುಮ್ಮನೆ ಬಿಡುವುದಿಲ್ಲ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಬಂಧನಕ್ಕೆ ಪೊಲೀಸರಿಗೆ ಸೂಚನೆ ನೀಡಲಾಗಿದೆ” ಎಂದು ಸ್ಪಷ್ಟಪಡಿಸಿದರು.
ಮತ್ತಷ್ಟು ಓದಿ: ಧರ್ಮಸ್ಥಳ ಪ್ರಕರಣ ಅನನ್ಯಾ ಭಟ್ ನಾಪತ್ತ ಎಸ್‌ಐಟಿ ತನಿಖೆ
ರಾಜಕೀಯ ಹೋರಾಟಕ್ಕೆ ಹೊಸ ತಿರುವು
ಈ ಘಟನೆಯಿಂದ ರಾಜ್ಯ ರಾಜಕೀಯ ಮತ್ತಷ್ಟು ಕಾವೇರಿದೆ. ಒಂದು ಕಡೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಡ ಹೆಚ್ಚಾಗಿದ್ದರೆ, ಇನ್ನೊಂದು ಕಡೆ ವಿಪಕ್ಷ ಸರ್ಕಾರದ ನಿಲುವನ್ನು ಪ್ರಶ್ನಿಸುತ್ತಿದೆ.
ಇದೇ ವೇಳೆ, ಸುನೀಲ್ ಕುಮಾರ್ ಅವರು ಪರಮೇಶ್ವರ್‌ರನ್ನು ಉದ್ದೇಶಿಸಿ, “ನೀವು ದೇಶದ ನಂ.1 ಗೃಹ ಸಚಿವರು, ಕ್ರಮ ಕೈಗೊಳ್ಳಿ” ಎಂದು ಹಾಸ್ಯಮಾಡಿದರು.





