
ಮಂಗಳೂರು ಫೆ.06: ಕರಾವಳಿಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದ್ದ ಪಿಲಿಕುಳ ನಿಸರ್ಗಧಾಮ ಹಾಗೂ ಮೃಗಾಲಯದ ಸ್ಥಿತಿ ಅತ್ಯಂತ ದಯನೀಯವಾಗಿದ್ದು, ಪ್ರಾಣಿಗಳ ಆರೋಗ್ಯ ಮತ್ತು ಜೀವಕ್ಕೆ ತೀವ್ರ ಅಪಾಯ ಎದುರಾಗಿರುವ ಹಿನ್ನೆಲೆಯಲ್ಲಿ ಮೃಗಾಲಯವನ್ನು ತಕ್ಷಣ ಮುಚ್ಚುವಂತೆ ನ್ಯಾಯಾಲಯ ಆದೇಶಿಸಿದೆ.
ವನ್ಯಜೀವಿ ಸಂರಕ್ಷಕ ಭುವನ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ, ಮೃಗಾಲಯದಲ್ಲಿನ ಪ್ರಾಣಿಗಳ ಫೋಟೋಗಳು ಹಾಗೂ ವರದಿಗಳನ್ನು ಪರಿಶೀಲಿಸಿದ ನ್ಯಾಯಾಧೀಶರು ಗಂಭೀರ ಆತಂಕ ವ್ಯಕ್ತಪಡಿಸಿದರು. ಪ್ರಾಣಿಗಳಿಗೆ ಸರಿಯಾದ ಚಿಕಿತ್ಸಾ ವ್ಯವಸ್ಥೆ ಇಲ್ಲದ ಕಾರಣ ಅನೇಕ ಪ್ರಾಣಿಗಳು ಸೊರಗುತ್ತಿರುವುದು ಹಾಗೂ ದುರ್ಬಲಗೊಂಡಿರುವುದು ದಾಖಲೆಗಳ ಮೂಲಕ ಬಹಿರಂಗವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಮೃಗಾಲಯದಲ್ಲಿ ಪ್ರಾಣಿಗಳಿಗೆ ಒದಗಿಸಲಾಗುತ್ತಿರುವ ನೀರು ಮಲೀನಗೊಂಡಿದ್ದು, ಅದನ್ನೇ ಕುಡಿಯುವ ಮೂಲಕ ಹಲವು ಪ್ರಾಣಿಗಳು ಅಸ್ವಸ್ಥಗೊಂಡಿರುವ ಘಟನೆಗಳೂ ನಡೆದಿವೆ. ಅಗತ್ಯ ಆರೈಕೆ, ಪೋಷಕಾಂಶಯುಕ್ತ ಆಹಾರ ಹಾಗೂ ಸಮರ್ಪಕ ವೈದ್ಯಕೀಯ ಮೇಲ್ವಿಚಾರಣೆ ಇಲ್ಲದಿರುವುದು ಅಧಿಕಾರಿಗಳ ಗಂಭೀರ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ನ್ಯಾಯಾಲಯ ಕಿಡಿಕಾರಿದೆ.

ಈ ಪರಿಸ್ಥಿತಿಗೆ ಕಾರಣವಾದ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಪ್ರಾಣಿಗಳ ಜೀವದೊಂದಿಗೆ ಆಟವಾಡಿದ ಅಧಿಕಾರಿಗಳಿಗೆ ಕೇವಲ ಎಚ್ಚರಿಕೆ ಸಾಲದು; ತಕ್ಕ ಶಿಕ್ಷೆ ವಿಧಿಸಬೇಕೆಂದು ಪ್ರಾಣಿ ಪ್ರಿಯರು ಹಾಗೂ ಸಾಮಾಜಿಕ ಸಂಘಟನೆಗಳೂ ಒತ್ತಾಯ ವ್ಯಕ್ತಪಡಿಸಿವೆ.
ಒಂದು ಕಾಲದಲ್ಲಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದ್ದ ಪಿಲಿಕುಳ ನಿಸರ್ಗಧಾಮವು ಇದೀಗ ಆಡಳಿತಾತ್ಮಕ ವೈಫಲ್ಯದ ಪ್ರತೀಕವಾಗಿ ಪರಿಣಮಿಸಿದ್ದು, ಪ್ರಾಣಿಗಳ ರಕ್ಷಣೆಗೆ ತಕ್ಷಣದ ಮತ್ತು ಶಾಶ್ವತ ಪರಿಹಾರ ಅಗತ್ಯವಾಗಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸರಕಾರ ಹಾಗೂ ಸಂಬಂಧಿತ ಅಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದರ ಮೇಲೆ ಸಾರ್ವಜನಿಕರ ಗಮನ ಕೇಂದ್ರೀಕೃತವಾಗಿದೆ.





