
ಬಳ್ಳಾರಿ, ಡಿ.13: ಬಳ್ಳಾರಿ ನಗರದಲ್ಲಿ ಬಿಡಾಡಿ ದನಗಳ ಹಾವಳಿಯಿಂದ ಬೇಸತ್ತಿದ್ದ ನಾಗರಿಕರಿಗೆ ಬಳ್ಳಾರಿ ಮಹಾನಗರ ಪಾಲಿಕೆಯಿಂದ ನಿರಾಳದ ಸುದ್ದಿ ಲಭಿಸಿದೆ. ನಗರ ವ್ಯಾಪ್ತಿಯಲ್ಲಿ ಅಡ್ಡಾಡುತ್ತಿರುವ ಬಿಡಾಡಿ ದನಗಳನ್ನು ಮಾನವೀಯವಾಗಿ ಹಿಡಿದು ಸುರಕ್ಷಿತವಾಗಿ ಸಾಗಿಸುವ ಕಾರ್ಯಕ್ಕೆ ಸಂಬಂಧಿಸಿದಂತೆ ಏಜೆನ್ಸಿ ಆಯ್ಕೆ ಪ್ರಕ್ರಿಯೆಯನ್ನು ಪಾಲಿಕೆ ಪೂರ್ಣಗೊಳಿಸಿದೆ.

ಬಳ್ಳಾರಿ ಮಹಾನಗರ ಪಾಲಿಕೆಯ ಅಧೀನ ಪ್ರದೇಶದಲ್ಲಿ ಒಟ್ಟು 500 ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಸಾಗಿಸುವ ಕಾರ್ಯಕ್ಕೆ ಪ್ರತಿ ದನಕ್ಕೆ ₹2,945 ದರ ನಿಗದಿಪಡಿಸಲಾಗಿದೆ. ಈ ಯೋಜನೆಯಡಿಯಲ್ಲಿ ಪಾಲಿಕೆಯು ಕಲ್ಯಾಣ ಕರ್ನಾಟಕ ಪ್ರಾಣಿ ದಯ ಹಾಗೂ ಗೋ ಸೇವಾ ಸಂಸ್ಥೆ, ಕಲಬುರಗಿ ಸಂಸ್ಥೆಗೆ ಕಾರ್ಯ ಆದೇಶ ನೀಡಿದೆ.

ಈ ಯೋಜನೆಗೆ ಒಟ್ಟು ₹14.72 ಲಕ್ಷಗಳ ವೆಚ್ಚ ಅಂದಾಜಿಸಲಾಗಿದ್ದು, ಟೆಂಡರ್, LOA ಹಾಗೂ ಕಾರ್ಯ ಆದೇಶಗಳನ್ನು ನಿಯಮಾನುಸಾರವಾಗಿ ಹೊರಡಿಸಲಾಗಿದೆ. ಕಾರ್ಯವನ್ನು Animal Welfare Board of India ಮಾರ್ಗಸೂಚಿಗಳಂತೆ, ಪ್ರಾಣಿಗಳಿಗೆ ಯಾವುದೇ ಹಾನಿಯಾಗದಂತೆ ಮಾನವೀಯವಾಗಿ ನಡೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ನಗರದ ಪ್ರಮುಖ ರಸ್ತೆ, ವಸತಿ ಪ್ರದೇಶ, ಮಾರುಕಟ್ಟೆ, ಶಾಲಾ–ಕಾಲೇಜು ಸುತ್ತಮುತ್ತ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡುತ್ತಿರುವ ಬಿಡಾಡಿ ದನಗಳನ್ನು ಹಿಡಿದು ನಿಗದಿತ ಗೋಶಾಲೆಗೆ ಸಾಗಿಸಲಾಗುತ್ತದೆ. ಇದರಿಂದ ರಸ್ತೆ ಅಪಘಾತಗಳು ಕಡಿಮೆಯಾಗುವುದರ ಜೊತೆಗೆ ಸಾರ್ವಜನಿಕರಿಗೆ ಸುರಕ್ಷತೆ ಒದಗಲಿದೆ.
ಬಳ್ಳಾರಿ ನಗರದಲ್ಲಿ ಬಿಡಾಡಿ ದನಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದಿಕ್ಕಿನಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಕೈಗೊಂಡ ನಿರ್ಧಾರಕ್ಕೆ ನಗರದ ನಾಗರಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಬಿಡಾಡಿ ದನಗಳಿಂದ ದೈನಂದಿನ ಜೀವನದಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದ ಜನರು, ಸಮಸ್ಯೆಗೆ ಸ್ಪಂದಿಸಿ ಕ್ರಮ ಕೈಗೊಂಡ ಮೇಯರ್ ಪಿ. ಗಾದೆಪ್ಪ, ಎಲ್ಲಾ ಪಾಲಿಕೆ ಸದಸ್ಯರು ಹಾಗೂ ಪಾಲಿಕೆ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಅದೇ ವೇಳೆ ಗೋ ರಕ್ಷಕರು ಮತ್ತು ಪ್ರಾಣಿ ಹಿತಾಸಕ್ತಿ ಸಂಘಟನೆಗಳು ಈ ಯೋಜನೆಯನ್ನು ಆತ್ಮೀಯವಾಗಿ ಸ್ವಾಗತಿಸಿದ್ದು, ದನಗಳನ್ನು ಮಾನವೀಯವಾಗಿ ಹಿಡಿದು ಸಾಗಿಸುವ ಕ್ರಮ ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.





