ಸೋನಿಯಾ ಗಾಂಧಿ ಆರೋಗ್ಯದಲ್ಲಿ ಚೇತರಿಕೆ; ಆಸ್ಪತ್ರೆಯಿಂದ ಡಿಸ್ಚಾರ್ಜ್!

0
18
Advertisement

ನವದೆಹಲಿ, ಜ.12: ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದ್ದು, ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಸುಮಾರು ಒಂದು ವಾರ ಚಿಕಿತ್ಸೆ ಪಡೆದ ಬಳಿಕ ಭಾನುವಾರ ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಎದೆಯ ಸೋಂಕು ಹಾಗೂ ತೀವ್ರಗೊಳ್ಳುತ್ತಿದ್ದ ಆಸ್ತಮಾ ಸಮಸ್ಯೆಯಿಂದಾಗಿ ಜನವರಿ 5ರ ಸಂಜೆ ಅವರನ್ನು ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಿರಿಯ ತಜ್ಞ ಡಾ. ಅರುಪ್ ಬಸು ಅವರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆಗೆ ಅವರು ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ‌.

ಆಸ್ಪತ್ರೆಯ ಅಧ್ಯಕ್ಷ ಡಾ. ಅಜಯ್ ಸ್ವರೂಪ್ ಅವರ ಪ್ರಕಾರ, ರಾಜಧಾನಿಯಲ್ಲಿನ ಚಳಿ ಹಾಗೂ ವಾಯುಮಾಲಿನ್ಯದ ಸಂಯೋಜಿತ ಪರಿಣಾಮದಿಂದಾಗಿ ಸೋನಿಯಾ ಗಾಂಧಿಯವರ ಶ್ವಾಸನಾಳ ಸ್ವಲ್ಪ ಹದಗೆಟ್ಟಿತ್ತು. ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ನಿರಂತರ ಮೇಲ್ವಿಚಾರಣೆ ಹಾಗೂ ಚಿಕಿತ್ಸೆ ನೀಡಲಾಗಿತ್ತು ಎಂದು ಅವರು ವಿವರಿಸಿದ್ದಾರೆ.

ಭಾನುವಾರ ಸಂಜೆ ಸುಮಾರು 5 ಗಂಟೆ ವೇಳೆಗೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಮುಂದಿನ ಚಿಕಿತ್ಸೆ ಮನೆಯಲ್ಲಿಯೇ ಮುಂದುವರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಸರ್ ಗಂಗಾ ರಾಮ್ ಆಸ್ಪತ್ರೆಯು ಭಾನುವಾರ ಅಧಿಕೃತವಾಗಿ ಆರೋಗ್ಯ ಸ್ಥಿತಿಗೆ ಸಂಬಂಧಿಸಿದ ಮಾಹಿತಿ ಬಿಡುಗಡೆ ಮಾಡಿದ್ದು, ಸೋನಿಯಾ ಗಾಂಧಿಯವರ ಸ್ಥಿತಿ ಇದೀಗ ಸ್ಥಿರವಾಗಿದೆ ಎಂದು ತಿಳಿಸಿದೆ.

Advertisement

LEAVE A REPLY

Please enter your comment!
Please enter your name here