ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಬಿಬಿಎಂಪಿ (BBMP) ಕೈಗೊಂಡಿದ್ದು, ಕಳೆದ ಹಲವು ದಿನಗಳಿಂದ ಸಕ್ರಿಯವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಇದೇ ಸಂದರ್ಭದಲ್ಲಿ, ಸೋಮವಾರ ತಡರಾತ್ರಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸ್ವತಃ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಯಲಹಂಕದ ಬಾಗಲೂರು ಮುಖ್ಯರಸ್ತೆ, ಎಂಎಸ್ ಪಾಳ್ಯದ ಸಂದೀಪ್ ಉಣ್ಣೀಕೃಷ್ಣನ್ ರಸ್ತೆ ಹಾಗೂ ಈಜಿಪುರದ ಪ್ಲೈಓವರ್ ಕಾಮಗಾರಿಗಳನ್ನು ವೀಕ್ಷಿಸಿದ ಅವರು, ಅಧಿಕಾರಿಗಳಿಂದ ಪ್ರಗತಿ ವರದಿ ಪಡೆದುಕೊಂಡರು.
ಮತ್ತಷ್ಟು ಓದಿ: ತಿಮರೋಡಿ ಮನೆ ಮೇಲೆ ಎಸ್‌ಐಟಿ ದಾಳಿ ಪೊಲೀಸರು ನಡೆಸಿದ ತೀವ್ರ ಶೋಧ ಕಾರ್ಯಾಚರಣೆ
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ನಗರದ ಶಾಸಕರು ರಸ್ತೆ ಗುಂಡಿ ಸಮಸ್ಯೆಯನ್ನು ಹಲವು ಬಾರಿ ತಮ್ಮ ಗಮನಕ್ಕೆ ತಂದಿದ್ದರು ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ, ನಗರದಲ್ಲಿ ಗುಂಡಿಗಳನ್ನು ಮುಚ್ಚಲು ವಿಶೇಷ ರಸ್ತೆ ಗುಂಡಿ ಗಮನ ತಂತ್ರಾಂಶವನ್ನು ಸಿದ್ಧಪಡಿಸಲಾಗಿದೆ. ಪೊಲೀಸರು ತಮ್ಮ ಠಾಣೆಗಳ ವ್ಯಾಪ್ತಿಯಲ್ಲಿರುವ ಗುಂಡಿಗಳ ಪಟ್ಟಿಯನ್ನು ನೀಡುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ, ನಾಗರಿಕರು ಆಪ್ ಮೂಲಕ ನೇರವಾಗಿ ದೂರುಗಳನ್ನು ಸಲ್ಲಿಸಬಹುದು ಎಂದರು.
ಇತ್ತೀಚೆಗೆ ಬಾಗಲೂರು ರಸ್ತೆಗೆ ಭೇಟಿ ನೀಡಿದಾಗಿನ ದುಸ್ಥಿತಿಯನ್ನು ಉಲ್ಲೇಖಿಸಿದ ಡಿಕೆ ಶಿವಕುಮಾರ್, ನಗರದಾದ್ಯಂತ ರಸ್ತೆ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು. ಈಗಾಗಲೇ 5000ಕ್ಕೂ ಹೆಚ್ಚು ಗುಂಡಿಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ 4400 ಗುಂಡಿಗಳನ್ನು ಆದ್ಯತೆಯಿಂದ ಮುಚ್ಚುವಂತೆ ಸೂಚಿಸಲಾಗಿದೆ. ಅದರಂತೆ, ಕಳೆದ ನಾಲ್ಕು ದಿನಗಳಲ್ಲಿ 2200ಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಮಾಹಿತಿ ನೀಡಿದರು
ನಗರದಲ್ಲಿ ಸ್ವಚ್ಛತೆ ಕಾಪಾಡುವ ಕಾರ್ಯ ಜಾರಿಯಲ್ಲಿದ್ದು, ಸ್ಕೈವಾಕ್‌ಗಳನ್ನೂ ಸ್ವಚ್ಛಗೊಳಿಸಲಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚುವುದು ಮಾತ್ರವಲ್ಲ, ಗುಣಮಟ್ಟಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಡಿಕೆ ಶಿವಕುಮಾರ್ ಹೇಳಿದರು. ಈ ಹಿನ್ನೆಲೆಯಲ್ಲಿ ಹಾಟ್ ಮಿಕ್ಸ್, ಕೋಲ್ಡ್ ಮಿಕ್ಸ್ ಹಾಗೂ ಇಕೋಫಿಕ್ಸ್ ಸೇರಿದಂತೆ ಮೂರು ವಿಧಾನಗಳಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ರಸ್ತೆ ನಿರ್ಮಾಣದಲ್ಲಿ ಉತ್ತಮ ಗುಣಮಟ್ಟ ಕಾಪಾಡಬೇಕಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಭಾರೀ ವಾಹನಗಳ ಸಂಚಾರ, ಮಳೆಗಾಲ ಮತ್ತು ಇತರ ಸವಾಲುಗಳಿಂದಾಗಿ ಸಮಸ್ಯೆಗಳು ಎದುರಾಗುತ್ತವೆ ಎಂದರು. ಇದಕ್ಕಾಗಿ ಹಂತ ಹಂತವಾಗಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದ್ದು, ಅವು 30 ವರ್ಷಗಳವರೆಗೆ ಬಾಳಿಕೆ ಬರುವಂತೆ ಯೋಜನೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗುಂಡಿಗಳ ಕಾರಣದಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, “ಹೆಣ್ಣು ಮಕ್ಕಳು ಮತ್ತು ಚಿಕ್ಕ ಮಕ್ಕಳನ್ನು ಕರೆದೊಯ್ಯುವಾಗ ಉಂಟಾಗುವ ತೊಂದರೆಗಳನ್ನು ನಾನು ಸ್ವತಃ ಗಮನಿಸಿದ್ದೇನೆ. ಅದಕ್ಕಾಗಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಕೈಗೊಳ್ಳಲಾಗಿದೆ. ಜೊತೆಗೆ, ರಸ್ತೆ ಗುಂಡಿಗಳ ಮೇಲ್ವಿಚಾರಣೆಗಾಗಿ ರಸ್ತೆ ಗುಂಡಿ ಗಮನ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ” ಎಂದು ಹೇಳಿದರು.
