
ಬೆಂಗಳೂರು, ಮಾ.21: ‘ಲವ್ ಮಾಕ್ಟೈಲ್-3’ ಚಿತ್ರದ ಕುರಿತು ಕೆಲವು ಮಾಧ್ಯಮಗಳಲ್ಲಿ ನಡೆಯುತ್ತಿರುವ ನೆಗಟಿವ್ ಪ್ರಚಾರದ ಬಗ್ಗೆ ನಟ-ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಕನ್ನಡ ಸುದ್ದಿ ವಾಹಿನಿ ಬಿಟಿವಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಅನ್ನು ತಮ್ಮ ‘ಎಕ್ಸ್’ (X) ಖಾತೆಯಲ್ಲಿ ಮರುಹಂಚಿಕೊಂಡಿರುವ ಅವರು, ಕನ್ನಡ ಚಿತ್ರಗಳಿಗೆ ದೊರೆಯುತ್ತಿರುವ ಬೆಂಬಲದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
“ಎಲ್ಲಾ ನಿಮ್ಮ ಆಶೀರ್ವಾದ 🙏 ‘ಧುರಂಧರ್’ನಲ್ಲಿ ಒಂದು ಡೈಲಾಗ್ ಇದೆ – ‘ಹಿಂದೂಸ್ತಾನ್ ಕಾ ಸಬ್ಸೇ ಬಡಾ ದುಶ್ಮನ್ ಏಕ್ ಹಿಂದೂಸ್ತಾನೀ ಹೀ ಹೈ’… ನಿಮ್ಮ ಸಪೋರ್ಟ್ ಕನ್ನಡ ಚಿತ್ರಗಳ ಮೇಲೆ ಹೀಗೆ ಇರಲಿ” ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಈ ಮೂಲಕ ಕನ್ನಡ ಸಿನಿಮಾಗಳಿಗೆ ನಕಾರಾತ್ಮಕ ವಾತಾವರಣ ಸೃಷ್ಟಿಸುವ ಪ್ರವೃತ್ತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಟಿವಿ ಹಂಚಿಕೊಂಡಿದ್ದ ಪೋಸ್ಟ್‌ನಲ್ಲಿ ‘ಲವ್ ಮಾಕ್ಟೈಲ್-3’ ಚಿತ್ರದ ಬಗ್ಗೆ ಟೀಕಾತ್ಮಕ ಶೀರ್ಷಿಕೆಗಳನ್ನು ಬಳಸಲಾಗಿದೆ. ಈ ಹಿನ್ನೆಲೆಯಲ್ಲಿ ಕೃಷ್ಣ ಅವರು ಆ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಚಿತ್ರಕ್ಕೆ ನ್ಯಾಯಯುತ ಬೆಂಬಲ ದೊರೆಯಬೇಕೆಂಬ ಸಂದೇಶ ನೀಡಿದ್ದಾರೆ.
‘ಲವ್ ಮಾಕ್ಟೈಲ್-3’ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ, ಮಿಲನ ನಾಗರಾಜ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಕೃಷ್ಣ ಸ್ವತಃ ರಚಿಸಿದ್ದು, ನಿರ್ಮಾಣವನ್ನು ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಮಾಡಿದ್ದಾರೆ. ನಕುಲ್ ಅಭಯಂಕರ್ ಅವರ ಸಂಗೀತ ಚಿತ್ರಕ್ಕಿದೆ.
ಇದರ ಮಧ್ಯೆ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಚಿತ್ರದ ಪರ ಬೆಂಬಲ ವ್ಯಕ್ತಪಡಿಸುತ್ತಿದ್ದು, ಕೆಲವು ವಲಯಗಳಲ್ಲಿ ಮಾಧ್ಯಮಗಳ ವರದಿ ಶೈಲಿಯ ಬಗ್ಗೆ ಚರ್ಚೆಗಳು ಜೋರಾಗಿವೆ.





