ಪೋಲಿಸ್‌ ಇಲಾಖೆಗೆ ಭರ್ಜರಿ ಗಿಫ್ಟ್; ಸರ್ಕಾರದಿಂದ ಬಹುಮಾನ ಘೋಷಣೆ!

0
9
Advertisement

ಬೆಂಗಳೂರು, ಜ.23: ಪೋಲಿಸ್‌ ಇಲಾಖೆಯಲ್ಲಿ ಶ್ಲಾಘನೀಯ ಹಾಗೂ ಪರಿಣಾಮಕಾರಿ ಕಾರ್ಯ ನಿರ್ವಹಿಸಿರುವ ವಿವಿಧ ದರ್ಜೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ರಾಜ್ಯ ಸರ್ಕಾರ ನಗದು ಬಹುಮಾನ ಘೋಷಿಸಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಸೇರಿ ಹಲವು ಗಂಭೀರ ಪ್ರಕರಣಗಳ ಸಮರ್ಪಕ ತನಿಖೆ, ಸಾಕ್ಷ್ಯಾಧಾರ ಸಂಗ್ರಹ ಮತ್ತು ನ್ಯಾಯಾಲಯದ ವಿಚಾರಣೆಯನ್ನು ಗಮನಿಸಿ ಈ ಬಹುಮಾನ ಮಂಜೂರು ಮಾಡಲಾಗಿದೆ.

ಜ್ಯ ಸರ್ಕಾರದ ಆದೇಶದಂತೆ, ಡಿಜಿ ಮತ್ತು ಐಜಿಪಿ ಶ್ರೇಣಿಯ ಅಧಿಕಾರಿಗಳಿಗೆ ತಲಾ 20,000 ರೂ.ನಂತೆ ಒಟ್ಟು 25 ಲಕ್ಷ ರೂ. ನೀಡಲಾಗುತ್ತದೆ. ಡಿಜಿಪಿ, ಎಡಿಜಿಪಿ ಮತ್ತು ಐಜಿಪಿ ಶ್ರೇಣಿಯ ಅಧಿಕಾರಿಗಳಿಗೆ ತಲಾ 8,000 ರೂ.ನಂತೆ ಒಟ್ಟು 3 ಲಕ್ಷ ರೂ. ಮಂಜೂರು ಮಾಡಲಾಗಿದೆ. ಇಲಾಖೆಯ ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತಲಾ 5,000 ರೂ.ನಂತೆ ಒಟ್ಟು 2 ಲಕ್ಷ ರೂ., ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಲಾ 5,000 ರೂ.ನಂತೆ 1 ಲಕ್ಷ ರೂ. ನೀಡಲಾಗುತ್ತದೆ. ಈ ಮೂಲಕ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗೆ ಒಟ್ಟಾರೆ 35 ಲಕ್ಷ ರೂ. ನಗದು ಬಹುಮಾನ ಘೋಷಿಸಲಾಗಿದೆ.

ಹಾಸನ ಜಿಲ್ಲೆಯ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಎಚ್.ಡಿ. ರೇವಣ್ಣ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ತನಿಖೆಗೆ ರಚಿಸಲಾದ ವಿಶೇಷ ತನಿಖಾ ತಂಡವು ಸಮರ್ಥವಾಗಿ ಕಾರ್ಯನಿರ್ವಹಿಸಿದೆ. ಪ್ರಜ್ವಲ್‌ ರೇವಣ್ಣ ವಿರುದ್ಧ ನಾಲ್ಕು ಹಾಗೂ ಎಚ್.ಡಿ. ರೇವಣ್ಣ ವಿರುದ್ಧ ಒಂದು ಪ್ರಕರಣ ಸೇರಿದಂತೆ ಒಟ್ಟು ಐದು ಪ್ರಕರಣಗಳಲ್ಲಿ ಸಾಕ್ಷ್ಯಾಧಾರ ಸಂಗ್ರಹಿಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಈ ಪ್ರಕರಣಗಳಲ್ಲಿ ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಮೊ.ಸಂ. 02/2024 ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ಆರೋಪಿಗಳ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅಪರಾಧಿಗೆ ಆಜೀವ ಕಾರಾವಾಸ ಹಾಗೂ 11,60,000 ರೂ. ದಂಡ ವಿಧಿಸಿದೆ. ದಂಡದ ಮೊತ್ತದಲ್ಲಿ 11,25,000 ರೂ. ಅನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಲು ಆದೇಶಿಸಲಾಗಿದೆ.

ಈ ತನಿಖೆ ನಡೆಸಿದ ಎಸ್‌ಐಟಿ ಮುಖ್ಯಸ್ಥ ಬಿಕೆ ಸಿಂಗ್, ಡಿಐಜಿ ಸೀಮಾ ಲಾಟ್ಕರ್, ಎಸ್‌ಪಿ ಸುಮನ್ ಡಿ. ಪೆನ್ನೇಕರ್, ಎಸ್‌ಪಿ ಸಿ.ಎ. ಸೈಮನ್, ಎಸಿಪಿ ಸತ್ಯನಾರಾಯಣ ಸಿಂಗ್, ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್, ಇನ್ಸ್‌ಪೆಕ್ಟರ್ ಶೋಭಾ ಜಿ., ಸುಮಾರಾಣಿ, ಹೇಮಂತ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಗದು ಬಹುಮಾನ ಮಂಜೂರಾಗಿದೆ.

ಇದೇ ವೇಳೆ, ದಾವಣಗೆರೆ ಜಿಲ್ಲೆಯ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಬ್ಯಾಂಕ್‌ ಕಳವು ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಕಳುವಾದ ಮಾಲನ್ನು ಪತ್ತೆ ಹಚ್ಚಲು ಶ್ರಮಿಸಿದ 83 ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗೆ 10,02,500 ರೂ. ನಗದು ಬಹುಮಾನ ಮಂಜೂರು ಮಾಡಲು ಪೊಲೀಸ್‌ ಮಹಾ ನಿರೀಕ್ಷಕರು (ಪೂರ್ವ ವಲಯ), ದಾವಣಗೆರೆ ಶಿಫಾರಸು ಮಾಡಿದ್ದರು. ಈ ಪ್ರಕರಣವನ್ನು ವಿಶೇಷವೆಂದು ಪರಿಗಣಿಸಿ, ಶ್ಲಾಘನೀಯ ಸೇವೆ ಸಲ್ಲಿಸಿದವರಿಗೆ ಸರ್ಕಾರ ಬಹುಮಾನ ನೀಡಿದೆ.

Advertisement

LEAVE A REPLY

Please enter your comment!
Please enter your name here