
ರಾಂಚಿ,ಜ.23: ಜಾರ್ಖಂಡ್ನಲ್ಲಿ ಭದ್ರತಾ ಪಡೆಗಳು ನಡೆಸಿದ ಭೀಕರ ಎನ್ಕೌಂಟರ್ನಲ್ಲಿ ತಲೆಗೆ ₹1 ಕೋಟಿ ಬಹುಮಾನ ಘೋಷಿಸಲಾಗಿದ್ದ ಟಾಪ್ ಮಾವೋವಾದಿ ನಾಯಕ ಅನಲ್ ದಾ ಸೇರಿದಂತೆ ಒಟ್ಟು 15 ನಕ್ಸಲೀಯರು ಹತರಾಗಿದ್ದಾರೆ. ಈ ಕಾರ್ಯಾಚರಣೆ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಸರಂದಾ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ನಕ್ಸಲ್ ಚಟುವಟಿಕೆಗಳಿಗೆ ದೊಡ್ಡ ಹೊಡೆತವಾಗಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಪತಿರಾಮ್ ಮಾಂಝಿ ಅಲಿಯಾಸ್ ಅನಲ್ ದಾ ಸಾವನ್ನಪ್ಪಿರುವುದು ಖಚಿತವಾಗಿದೆ. ಈ ಕುರಿತು ಜಾರ್ಖಂಡ್ ನ ಐಜಿಎಸ್ ಮೈಕೆಲ್ರಾಜ್ ಅಧಿಕೃತವಾಗಿ ದೃಢಪಡಿಸಿದ್ದು, ಘಟನಾ ಪ್ರದೇಶದಲ್ಲಿ ಇನ್ನೂ ವ್ಯಾಪಕ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಗುಪ್ತಚರ ಮಾಹಿತಿಯ ಆಧಾರದ ಮೇಲೆ ಗುರುವಾರ ಮುಂಜಾನೆ , ಚೋಟಾನಾಗ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಬ್ಡಿಹ್ ಗ್ರಾಮದ ಸಮೀಪ ಜಂಟಿ ಕಾರ್ಯಾಚರಣೆ ಆರಂಭಿಸಲಾಯಿತು. ಭದ್ರತಾ ಪಡೆಗಳು ಹಾಗೂ ನಕ್ಸಲೀಯರ ನಡುವೆ ಹಲವು ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯ ಬಳಿಕ 15 ಮಂದಿ ನಕ್ಸಲೀಯರು ಹತರಾಗಿರುವುದು ದೃಢಪಟ್ಟಿದೆ.
ಯಾರು ಈ ಅನಲ್ ದಾ?
ಗಿರಿದಿಹ್ ಜಿಲ್ಲೆಯ ಮೂಲದ ಅನಲ್ ದಾ, ಕಳೆದ ಎರಡು ದಶಕಗಳಿಂದ ನಕ್ಸಲ್ ಚಳುವಳಿಯಲ್ಲಿ ಸಕ್ರಿಯವಾಗಿದ್ದ ಹಿರಿಯ ನಾಯಕನಾಗಿದ್ದ. ಗಿರಿದಿಹ್, ಬೊಕಾರೊ, ಹಜಾರಿಬಾಗ್, ಖುಂಟಿ, ಸೆರೈಕೆಲಾ–ಖಾರ್ಸಾವನ್ ಹಾಗೂ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಗಳಲ್ಲಿ ಅವನ ಪ್ರಭಾವ ಇದ್ದುದಾಗಿ ವರದಿಯಾಗಿದೆ. ಸರಂದಾ ಮತ್ತು ಕೊಲ್ಹಾನ್ ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆ ಬಲಪಡಿಸುವಲ್ಲಿ ಅವನು ನಿರ್ಣಾಯಕ ಪಾತ್ರ ವಹಿಸಿದ್ದಾನೆ ಎನ್ನಲಾಗಿದೆ.
ಭದ್ರತಾ ಪಡೆಗಳ ಮೇಲೆ ದಾಳಿ, ಐಇಡಿ ಸ್ಫೋಟ, ಸುಲಿಗೆ, ಗುತ್ತಿಗೆದಾರರಿಗೆ ಬೆದರಿಕೆ ಸೇರಿದಂತೆ ಅನೇಕ ಗಂಭೀರ ಕ್ರಿಮಿನಲ್ ಪ್ರಕರಣಗಳು ಅನಲ್ ದಾ ವಿರುದ್ಧ ದಾಖಲಾಗಿದ್ದವು. ಅವನ ತಲೆಗೆ ₹1 ಕೋಟಿ ಬಹುಮಾನ ಘೋಷಿಸಲಾಗಿತ್ತು.
ಈ ಎನ್ಕೌಂಟರ್ ಕುರಿತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ಕೊಲ್ಹಾನ್ ವಿಭಾಗದ ಡಿಐಜಿ ಅನುರಂಜನ್ ಕಿಸ್ಪೊಟ್ಟಾ ತಿಳಿಸಿದ್ದಾರೆ.





