‘ನಾನೇ ವೆನೆಜುವೆಲಾದ ಹಂಗಾಮಿ ಅಧ್ಯಕ್ಷ’ – ಟ್ರಂಪ್ ಸ್ಫೋಟಕ ಹೇಳಿಕೆ!

0
14
Advertisement

ವಾಷಿಂಗ್ಟನ್, ಜ.12: ವೆನೆಜುವೆಲಾ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಸ್ಫೋಟಕ ಹೇಳಿಕೆ ನೀಡಿ ಜಾಗತಿಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ. ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿರುವುದಾಗಿ ಘೋಷಿಸಿದ್ದ ಟ್ರಂಪ್, ಇದೀಗ ತಾನು ಆ ದೇಶದ ‘ಹಂಗಾಮಿ ಸರ್ವೋಚ್ಚ ನಾಯಕ’ ಎಂಬ ಹೊಸ ಹೇಳಿಕೆಯನ್ನು ಮುಂದಿಟ್ಟಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ವೇದಿಕೆ TRUTH ನಲ್ಲಿ ಆಘಾತಕಾರಿ ಪೋಸ್ಟ್ ಪ್ರಕಟಿಸಿದ್ದು, ಅದರಲ್ಲಿ ತಮ್ಮನ್ನು “ವೆ್‌ವೆನೆಜುವೆಲಾದ ಹಂಗಾಮಿ ಅಧ್ಯಕ್ಷ” ಎಂದು ಬಣ್ಣಿಸಿಕೊಂಡಿದ್ದಾರೆ. ಜೊತೆಗೆ, ಜನವರಿ 2026 ರಿಂದ ಡೊನಾಲ್ಡ್ ಟ್ರಂಪ್ ವೆನೆಜುವೆಲಾದ ಅಧ್ಯಕ್ಷರಾಗಿರುವಂತೆ ತೋರಿಸುವ ಸಂಪಾದಿತ ವಿಕಿಪೀಡಿಯಾ ಪುಟದ ಮಾದರಿ ಚಿತ್ರವನ್ನೂ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಮತ್ತು ಟೀಕೆಗೆ ಕಾರಣವಾಗಿದೆ.

ವೆನೆಜುವೆಲಾದ ಸರ್ಕಾರ ಉರುಳಿಸಿದ್ದ ಅಮೆರಿಕ?

ಜನವರಿ ಆರಂಭದಲ್ಲಿ ವೆನೆಜುವೆಲಾದ ಸರ್ಕಾರವನ್ನು ಉರುಳಿಸುವ ಉದ್ದೇಶದಿಂದ ಅಮೆರಿಕ ಭಾರೀ ಸೈನಿಕ ಕಾರ್ಯಾಚರಣೆಗೆ ಕೈ ಹಾಕಿತ್ತು. ಈ ಕಾರ್ಯಾಚರಣೆಯಲ್ಲಿ ಅಧ್ಯಕ್ಷ ನಿಕೋಲಸ್ ಮಡುರೊ ಹಾಗೂ ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಲಾಗಿದೆ ಎಂದು ಅಮೆರಿಕ ಘೋಷಿಸಿತ್ತು. ಬಳಿಕ ಮಾತನಾಡಿದ್ದ ಟ್ರಂಪ್, “ಸುರಕ್ಷಿತ ಹಾಗೂ ನ್ಯಾಯಯುತ ಅಧಿಕಾರ ಪರಿವರ್ತನೆ ಖಚಿತವಾಗುವವರೆಗೆ ವೆನೆಜುವೆಲಾದ ಆಡಳಿತವನ್ನು ಅಮೆರಿಕವೇ ನೋಡಿಕೊಳ್ಳಲಿದೆ” ಎಂದು ಹೇಳಿದ್ದರು.

ಆದರೆ, ವೆನೆಜುವೆಲಾದ ಸುಪ್ರೀಂ ಕೋರ್ಟ್ ಮಡುರೊ ಅವರ ಆಪ್ತ ಸಹಚರೆಯಾಗಿರುವ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರನ್ನು ಮಧ್ಯಂತರ ಅಧ್ಯಕ್ಷೆಯಾಗಿ ನೇಮಿಸಿತು. ಈ ನಿರ್ಣಯಕ್ಕೆ ವೆನೆಜುವೆಲಾ ಸೇನೆಯೂ ಬೆಂಬಲ ನೀಡಿದ್ದು, ಮಡುರೊ ಆಡಳಿತಕ್ಕೆ ಅಧಿಕೃತ ತೆರೆ ಬಿದ್ದಂತಾಗಿದೆ.

ತೈಲದ ಮೇಲೆ ಕಣ್ಣಿಟ್ಟ ಟ್ರಂಪ್ ಆಡಳಿತ

ತೈಲ ಸಂಪತ್ತಿನಲ್ಲಿ ಶ್ರೀಮಂತವಾಗಿರುವ ವೆನೆಜುವೆಲಾದ ಮೇಲೆ ದಾಳಿ ನಡೆಸುವ ಮೂಲಕ ಟ್ರಂಪ್ ನೇರ ಯುದ್ಧದ ಎಚ್ಚರಿಕೆ ನೀಡಿದ್ದಾರೆ. ಮಡುರೊ ಅವರ ಬೆಂಬಲಿಗರು ಅಮೆರಿಕದ ಷರತ್ತುಗಳನ್ನು ಪಾಲಿಸದಿದ್ದರೆ ಇನ್ನಷ್ಟು ಸೈನಿಕ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಈ ಷರತ್ತುಗಳಲ್ಲಿ ಪ್ರಮುಖವಾದುದು ವೆನೆಜುವೆಲಾದ ತೈಲದ ಮೇಲಿನ ನಿಯಂತ್ರಣ. ಬುಧವಾರ ಅಮೆರಿಕ ಪಡೆಗಳು ವೆನೆಜುವೆಲಾಗೆ ಸೇರಿದ ಹಲವು ತೈಲ ಟ್ಯಾಂಕರ್‌ಗಳನ್ನು ವಶಪಡಿಸಿಕೊಂಡಿವೆ. 50 ಮಿಲಿಯನ್ ಬ್ಯಾರೆಲ್ ವೆನೆಜುವೆಲಾದ ಕಚ್ಚಾ ತೈಲವನ್ನು ಸಂಸ್ಕರಿಸಿ ಮಾರಾಟ ಮಾಡಲು ಅಮೆರಿಕ ಯೋಜನೆ ರೂಪಿಸಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

ಮೂರು ಹಂತದ ಯೋಜನೆ

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮಾತನಾಡಿ, ವೆನೆಜುವೆಲಾಗೆ ಸಂಬಂಧಿಸಿದಂತೆ ಮೂರು ಹಂತದ ಯೋಜನೆ ಜಾರಿಯಲ್ಲಿದೆ ಎಂದಿದ್ದಾರೆ. ಮೊದಲ ಹಂತದಲ್ಲಿ ಮಡುರೊ ಬಂಧನದ ಬಳಿಕ ದೇಶವನ್ನು ಸ್ಥಿರಗೊಳಿಸುವುದು, ಎರಡನೇ ಹಂತದಲ್ಲಿ ಚೇತರಿಕೆಯ ಅವಧಿಯಲ್ಲಿ ಅಮೆರಿಕದ ತೈಲ ಕಂಪನಿಗಳಿಗೆ ಪ್ರವೇಶ ನೀಡುವುದು, ಮೂರನೇ ಹಂತದಲ್ಲಿ ಅಧಿಕಾರ ಪರಿವರ್ತನೆಯನ್ನು ಮೇಲ್ವಿಚಾರಣೆ ಮಾಡುವುದು ಯೋಜನೆಯಾಗಿದೆ. “ಮಧ್ಯಂತರ ಸರ್ಕಾರದ ಮೇಲೆ ಸಂಪೂರ್ಣ ನಿಯಂತ್ರಣ ಮತ್ತು ಒತ್ತಡ ಕಾಯ್ದುಕೊಳ್ಳುವ ವ್ಯವಸ್ಥೆ ನಮಗಿದೆ” ಎಂದು ರೂಬಿಯೊ ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಟೀಕೆ

ವೆನೆಜುವೆಲಾ ಮೇಲಿನ ಅಮೆರಿಕದ ಸೈನಿಕ ದಾಳಿಗೆ ಜಗತ್ತಿನ ಹಲವು ರಾಷ್ಟ್ರಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಚೀನಾ, ರಷ್ಯಾ, ಕೊಲಂಬಿಯಾ ಹಾಗೂ ಸ್ಪೇನ್ ಸೇರಿದಂತೆ ಅನೇಕ ದೇಶಗಳು, ಅಮೆರಿಕದ ಕ್ರಮವನ್ನು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಕರೆದಿವೆ. ತೈಲ ಸಂಪತ್ತಿನ ದೇಶವನ್ನು ಗುರಿಯಾಗಿಸಿಕೊಂಡು ತಿಂಗಳುಗಳ ಕಾಲ ನಡೆದ ಅಮೆರಿಕದ ಒತ್ತಡ, ನಿರ್ಬಂಧ ಮತ್ತು ಸೈನಿಕ ಚಟುವಟಿಕೆಯ ಅಂತಿಮ ಫಲವೇ ಈ ದಾಳಿ ಎಂದು ವಿಶ್ಲೇಷಿಸಲಾಗುತ್ತಿದೆ. ಮಡುರೊ ಅವರನ್ನು “ಅಪಹರಿಸಲಾಗಿದೆ” ಎಂದು ಕೆಲ ರಾಷ್ಟ್ರಗಳು ಕಿಡಿಕಾರಿವೆ.

Advertisement

LEAVE A REPLY

Please enter your comment!
Please enter your name here