
ಬೆಂಗಳೂರು, ಮಾ.21: ನಗರದಲ್ಲಿ ಪಾದಚಾರಿಗಳ ಸುರಕ್ಷತೆ ಹಾಗೂ ಸುಗಮ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಪಾದಚಾರಿ ಮಾರ್ಗಗಳಿಗೆ ಹೊಸ ನೀತಿ ರೂಪಿಸಲು ತೀರ್ಮಾನಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ನೀತಿಯ ಪ್ರಕಾರ ಮುಖ್ಯರಸ್ತೆ ಮತ್ತು ಉಪ ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದರು.
ವಿಧಾನಸೌಧದಲ್ಲಿ ಜಿಬಿಎ (ಗ್ರೇಟರ್ ಬೆಂಗಳೂರು ಅಥಾರಿಟಿ) ವ್ಯಾಪ್ತಿಯ ಪಾಲಿಕೆಗಳ ಬಜೆಟ್ ಸಿದ್ಧತೆ ಹಾಗೂ ಕಾರ್ಯಕಾರಿ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲಾ ಶಾಸಕರನ್ನು ಆಹ್ವಾನಿಸಿ ಬಜೆಟ್ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಚಿವರು ಮತ್ತು ಶಾಸಕರು ಭಾಗವಹಿಸಿದ್ದರು ಎಂದು ಹೇಳಿದರು.
ಐದು ಪಾಲಿಕೆಗಳು ತಮ್ಮದೇ ಪ್ರತ್ಯೇಕ ಬಜೆಟ್ ತಯಾರಿಸಿದ್ದು, ವಾರ್ಡ್‌ವಾರು ಅನುದಾನ ನೀಡುವಂತೆ ಶಾಸಕರು ಮನವಿ ಸಲ್ಲಿಸಿದ್ದಾರೆ. ಪಾದಚಾರಿ ಮಾರ್ಗಗಳ ಮೇಲೆ ಬೀದಿ ವ್ಯಾಪಾರಿಗಳ ಒತ್ತುವರಿ ಹೆಚ್ಚಿರುವ ಹಿನ್ನೆಲೆಯಲ್ಲಿ, ಅವರಿಗೆ ಪ್ರತ್ಯೇಕ ಸ್ಥಳಗಳನ್ನು ಗುರುತಿಸಿ ಪಾದಚಾರಿಗಳಿಗೆ ಸುಗಮವಾಗಿ ಸಂಚರಿಸಲು ಅವಕಾಶ ಕಲ್ಪಿಸುವುದಾಗಿ ತಿಳಿಸಿದರು. ಬೀದಿ ವ್ಯಾಪಾರಿಗಳಿಗೆ ನಿರ್ದಿಷ್ಟ ರಸ್ತೆಗಳು ನಿಗದಿಯಾಗಲಿದ್ದು, ಈ ಬಗ್ಗೆ ಎಲ್ಲಾ ಶಾಸಕರು ಒಮ್ಮತ ವ್ಯಕ್ತಪಡಿಸಿದ್ದಾರೆ ಎಂದರು.
ಹಗಲು ವ್ಯಾಪಾರ ಮಾಡಿ ರಾತ್ರಿ ವೇಳೆ ಗಾಡಿಗಳನ್ನು ಬೀದಿ ಬದಿಯಲ್ಲಿ ಬಿಟ್ಟು ಹೋಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಇಂತಹ ಗಾಡಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ ಎಂದರು. ಈಗಾಗಲೇ ಸುಮಾರು 60 ಸಾವಿರ ಬೀದಿ ವ್ಯಾಪಾರಿಗಳು ನೋಂದಾಯಿಸಿಕೊಂಡಿದ್ದು, 30 ಸಾವಿರ ಮಂದಿ ವಾಹನಗಳಿಗಾಗಿ ಮನವಿ ಸಲ್ಲಿಸಿದ್ದಾರೆ. ಗುರುತಿನ ಚೀಟಿ ಹೊಂದಿದವರಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ನಗರದಲ್ಲಿ ಅನಧಿಕೃತ ಫ್ಲೆಕ್ಸ್‌ಗಳ ಹಾವಳಿಯನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಯಾರು ಅನುಮತಿಯಿಲ್ಲದೆ ಫ್ಲೆಕ್ಸ್ ಅಳವಡಿಸುತ್ತಾರೋ ಅವರಿಗೆ ಪ್ರತಿ ಫ್ಲೆಕ್ಸ್‌ಗೆ 50 ಸಾವಿರದಿಂದ 1 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ಹೇಳಿದರು. ಸರ್ಕಾರದಿಂದ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ಅನುಮತಿ ಪಡೆದು ಫ್ಲೆಕ್ಸ್ ಹಾಕಬೇಕು ಎಂದು ಸೂಚಿಸಿದರು.
ಪಾಲಿಕೆ ವ್ಯಾಪ್ತಿಯ ಉದ್ಯಾನವನಗಳ ಕಾರ್ಯಾವಧಿಯನ್ನು ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು. ಇನ್ನು ರಸ್ತೆಗಳಲ್ಲಿ ದೀರ್ಘಕಾಲ ನಿಲ್ಲಿಸಿ ಬಿಡಲಾದ ಹಳೆಯ ವಾಹನಗಳನ್ನು ತೆರವುಗೊಳಿಸಿ ನಿಗದಿತ ಸ್ಥಳಗಳಿಗೆ ಸಾಗಿಸಲಾಗುವುದು. ಈ ಜವಾಬ್ದಾರಿಯನ್ನು ಪೊಲೀಸರಿಗೆ ನೀಡಲಾಗಿದೆ ಎಂದು ತಿಳಿಸಿದರು. ಬೆಲ್ಲಳ್ಳಿ, ಬಿಡಗಾನಹಳ್ಳಿ, ಬಿದ್ದನಳ್ಳಿ ಹಾಗೂ ಸೊಂಡೆಕೊಪ್ಪ ಪ್ರದೇಶಗಳಲ್ಲಿ ವಾಹನಗಳನ್ನು ಇರಿಸಲು ಸ್ಥಳಗಳನ್ನು ಗುರುತಿಸಲಾಗಿದೆ ಎಂದರು.
ವಾಹನ ಟೋಯಿಂಗ್ ವ್ಯವಸ್ಥೆಯನ್ನು ಬಲಪಡಿಸಲು ಪ್ರತಿ ಪಾಲಿಕೆಗೆ ಎರಡು ವಾಹನಗಳನ್ನು ನೀಡಲಾಗಿದೆ. ನಿಷೇಧಿತ ಪ್ರದೇಶಗಳಲ್ಲಿ ವಾಹನ ನಿಲುಗಡೆ ಮಾಡಿದರೆ ಟೋಯಿಂಗ್ ಮಾಡಲಾಗುವುದು ಎಂದು ಹೇಳಿದರು.
ಪ್ರತಿ ವಾರ್ಡಿಗೆ 5ರಿಂದ 10 ಕೋಟಿ ರೂ. ಅನುದಾನ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಅವರು ಆಕಾಶವನ್ನೂ ಕೇಳುತ್ತಿದ್ದಾರೆ, ಭೂಮಿಯನ್ನೂ ಕೇಳುತ್ತಿದ್ದಾರೆ; ಪರಿಸ್ಥಿತಿ ನೋಡಿ ತೀರ್ಮಾನ ಮಾಡಲಾಗುತ್ತದೆ” ಎಂದು ಹೇಳಿದರು.





