ಮುಂಜಾನೆ ಕಂಪಿಸಿದ ಭೂಮಿ; ಜಮ್ಮು–ಕಾಶ್ಮೀರ ಹಾಗೂ ಅಂಡಮಾನ್–ನಿಕೋಬಾರ್ ದ್ವೀಪಗಳಲ್ಲಿ ಭೂಕಂಪನ!

0
76

ನವದಹಲಿ, ಫೆ.02: ಜಮ್ಮು–ಕಾಶ್ಮೀರದ ಬಾರಾಮುಲ್ಲಾ ಹಾಗೂ ಅಂಡಮಾನ್–ನಿಕೋಬಾರ್ ದ್ವೀಪಗಳಲ್ಲಿ ಸೋಮವಾರ ಮುಂಜಾನೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಕ್ರಮವಾಗಿ 4.7 ಮತ್ತು 4.6 ತೀವ್ರತೆ ದಾಖಲಾಗಿದೆ.

ಇಂದು ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಅಂಡಮಾನ್–ನಿಕೋಬಾರ್ ದ್ವೀಪಗಳಲ್ಲಿ 4.6 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿಯಂತೆ, ಭೂಕಂಪದ ಕೇಂದ್ರಬಿಂದು 9.03° ಉತ್ತರ ಅಕ್ಷಾಂಶ ಮತ್ತು 92.78° ಪೂರ್ವ ರೇಖಾಂಶದಲ್ಲಿ, ಭೂಮಿಯ ಒಳಭಾಗದಲ್ಲಿ 10 ಕಿ.ಮೀ ಆಳದಲ್ಲಿತ್ತು.

ದ್ವೀಪಗಳಲ್ಲಿ ಭೂಕಂಪ ಸಂಭವಿಸಿದ ಕೆಲವೇ ಹೊತ್ತಿನಲ್ಲಿ ಜಮ್ಮು–ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಮತ್ತೊಂದು ಭೂಕಂಪನ ಸಂಭವಿಸಿದೆ. ಇಲ್ಲಿ ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆ ದಾಖಲಾಗಿದ್ದು, ಭೂಮಿಯ ಒಳಭಾಗದಲ್ಲಿ 10 ಕಿ.ಮೀ ಆಳದಲ್ಲಿ ಕಂಪನ ಉಂಟಾಗಿದೆ. ಇದರ ಕೇಂದ್ರಬಿಂದು ಗುಲ್ಮಾರ್ಗ್ ಸಮೀಪ ಮತ್ತು ಶ್ರೀನಗರದ ಪಶ್ಚಿಮ ಭಾಗದಲ್ಲಿ ಗುರುತಿಸಲಾಗಿದೆ.

ಭೂಕಂಪದಿಂದಾಗಿ ಇದುವರೆಗೆ ಯಾವುದೇ ಪ್ರಾಣಾಪಾಯ ಅಥವಾ ಆಸ್ತಿಹಾನಿ ಸಂಭವಿಸಿದ ವರದಿಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ನಿಗಾ ವಹಿಸಲಾಗಿದ್ದು, ಜನರು ಆತಂಕಪಡಬೇಕಿಲ್ಲ ಎಂದು ತಿಳಿಸಲಾಗಿದೆ.

LEAVE A REPLY

Please enter your comment!
Please enter your name here