ಅಕ್ರಮ ವಲಸಿಗರಿಗೆ ಕ್ರಿಸ್ ಮಸ್ ಆಫರ್ ಕೊಟ್ಟ ಟ್ರಂಪ್; ಅಮೇರಿಕ ತೊರೆದರೆ ಸಿಗಲಿದೆ 3 ಸಾವಿರ ಡಾಲರ್ ಸ್ಟೈಫಂಡ್!

0
27
Advertisement

ವಾಷಿಂಗ್ಟನ್, ಡಿ.23:ಸಾಮೂಹಿಕ ಗಡೀಪಾರುಗಳನ್ನು ವೇಗಗೊಳಿಸುವ ಜೊತೆಗೆ ಜಾರಿ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಡೊನಾಲ್ಡ್ ಟ್ರಂಪ್ ಸರ್ಕಾರ ಅಕ್ರಮ ವಲಸಿಗರಿಗೆ ವಿಶೇಷ ‘ಕ್ರಿಸ್‌ಮಸ್ ಆಫರ್’ ಘೋಷಿಸಿದೆ.

ಸ್ವಯಂಪ್ರೇರಣೆಯಿಂದ ಅಮೆರಿಕವನ್ನು ತೊರೆಯಲು ಒಪ್ಪಿಕೊಳ್ಳುವ ಅಕ್ರಮ ವಲಸಿಗರಿಗೆ 3,000 ಡಾಲರ್ (ಸುಮಾರು ರೂ. 2.70 ಲಕ್ಷ) ಸ್ಟೈಫಂಡ್ ನೀಡಲಾಗುವುದಾಗಿ ಪ್ರಕಟಿಸಲಾಗಿದೆ.

ವರ್ಷ್ಯಾಂತ್ಯದೊಳಗೆ ಅಮೆರಿಕ ತೊರೆಯಲು ಸಮ್ಮತಿಸುವ ಅಕ್ರಮ ವಲಸಿಗರಿಗೆ ಉಚಿತ ವಿಮಾನ ಪ್ರಯಾಣದ ವ್ಯವಸ್ಥೆಯ ಜೊತೆಗೆ ಈ ಆರ್ಥಿಕ ನೆರವು ಒದಗಿಸಲಾಗುತ್ತದೆ. ಅಕ್ರಮ ವಲಸಿಗರು ತಮ್ಮ ತಾಯ್ನಾಡಿಗೆ ಸುರಕ್ಷಿತವಾಗಿ ಮರಳಲು ನೆರವಾಗುವ ಉದ್ದೇಶದಿಂದ ರಜಾದಿನಗಳಲ್ಲಿಯೂ ಸೇವೆ ಮುಂದುವರಿಸಲಾಗುತ್ತದೆ ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ (DHS) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

CBP (ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್) ಹೋಮ್ ಅಪ್ಲಿಕೇಶನ್ ಮೂಲಕ ಸ್ವಯಂ-ಗಡೀಪಾರುಗಾಗಿ ನೋಂದಣಿ ಮಾಡಿಕೊಳ್ಳುವವರಿಗೆ ಈ ಸೌಲಭ್ಯ ಅನ್ವಯವಾಗಲಿದೆ. ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿದ ಬಳಿಕ ಉಳಿದ ಪ್ರಕ್ರಿಯೆಯನ್ನು ಡಿಎಚ್ಎಸ್ ಕೈಗೆತ್ತಿಕೊಳ್ಳುತ್ತದೆ. ಮನೆಗೆ ಮರಳುವ ಪ್ರಯಾಣದ ವ್ಯವಸ್ಥೆಯೊಂದಿಗೆ ನಿಗದಿತ ಮೊತ್ತವನ್ನು ನೀಡಲಾಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

“ರಜಾದಿನಗಳಲ್ಲಿ ಅಕ್ರಮ ವಿದೇಶಿಯರು ತಮ್ಮ ಹಾಗೂ ತಮ್ಮ ಕುಟುಂಬಗಳಿಗಾಗಿ ನೀಡಬಹುದಾದ ಅತ್ಯುತ್ತಮ ಉಡುಗೊರೆ ಸ್ವಯಂ-ಗಡೀಪಾರು. ಇದು ವೇಗವಾದ, ಉಚಿತ ಮತ್ತು ಸುಲಭವಾದ ಪ್ರಕ್ರಿಯೆ” ಎಂದು ಡಿಎಚ್ಎಸ್ ಹೇಳಿದೆ. ಆದರೆ ಈ ವಿಶೇಷ ಕೊಡುಗೆಯನ್ನು ಬಳಸಿಕೊಳ್ಳದೆ ಅಮೆರಿಕದಲ್ಲೇ ಉಳಿಯಲು ಪ್ರಯತ್ನಿಸುವ ಅಕ್ರಮ ವಲಸಿಗರಿಗೆ ಕಟ್ಟುನಿಟ್ಟಿನ ಕ್ರಮ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಅವರನ್ನು ಬಂಧಿಸಿ ಬಲವಂತವಾಗಿ ಗಡೀಪಾರು ಮಾಡಲಾಗುತ್ತದೆ. ಇಂತಹವರಿಗೆ ಮುಂದಿನ ದಿನಗಳಲ್ಲಿ ಅಮೆರಿಕ ಪ್ರವೇಶಿಸಲು ಅವಕಾಶ ದೊರೆಯುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

Advertisement

LEAVE A REPLY

Please enter your comment!
Please enter your name here