ಕಾನ್ಫಿಡೆಂಟ್ ಗ್ರೂಪ್ ಮಾಲೀಕ-ಉದ್ಯಮಿ ಸಿ.ಜೆ ರಾಯ್ ಆತ್ಮಹತ್ಯೆ!

0
11
Advertisement

ಬೆಂಗಳೂರು, ಜ.30: ದೇಶ–ವಿದೇಶಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ, ಖ್ಯಾತ ಉದ್ಯಮಿ ಸಿ.ಜೆ ರಾಯ್ ಇಂದು ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಕಾನ್ಫಿಡೆಂಟ್ ಗ್ರೂಪ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ, ಸಿ.ಜೆ ರಾಯ್ ತಮ್ಮ ಬಳಿ ಇದ್ದ ರಿವಾಲ್ವರ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಜೀವನಕ್ಕೆ ತೆರೆ ಎಳೆದಿದ್ದಾರೆ ಎನ್ನಲಾಗಿದೆ.

ಘಟನೆ ನಗರದ ರಿಚ್ಮಂಡ್ ಸರ್ಕಲ್ ಸಮೀಪದ ಲ್ಯಾಂಡ್‌ಫೋರ್ಡ್ ರಸ್ತೆಯಲ್ಲಿರುವ ಕಚೇರಿಯಲ್ಲಿ ನಡೆದಿದೆ. ಮಧ್ಯಾಹ್ನ ವೇಳೆ ಕಚೇರಿಗೆ ಆಗಮಿಸಿದ್ದ ಸಿ.ಜೆ ರಾಯ್ ಅವರನ್ನು ಐಟಿ ಅಧಿಕಾರಿಗಳು ಸುಮಾರು ಒಂದು ಗಂಟೆ ಕಾಲ ವಿಚಾರಣೆ ನಡೆಸಿದ್ದರು. ಈ ಸಂದರ್ಭದಲ್ಲೇ ಅಧಿಕಾರಿಗಳ ಸಮ್ಮುಖದಲ್ಲೇ ಅವರು ತಲೆಗೆ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗಂಭೀರವಾಗಿ ಗಾಯಗೊಂಡ ಸಿ.ಜೆ ರಾಯ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಇಂದು ಏಕಾಏಕಿ ಐಟಿ ದಾಳಿ ನಡೆದಿದ್ದು, ಕಾನ್ಫಿಡೆಂಟ್ ಗ್ರೂಪ್ ಮೇಲೆ ಇದು ಮೊದಲ ದಾಳಿ ಅಲ್ಲ. ಈ ಹಿಂದೆಯೂ ಹಲವು ಬಾರಿ ಐಟಿ ದಾಳಿಗಳು ನಡೆದಿದ್ದವು. ಈ ಹಿನ್ನೆಲೆಯಲ್ಲೇ ನಡೆದಿರುವ ಈ ದುರಂತ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕೇರಳ ಮೂಲದವರಾದ ಸಿ.ಜೆ ರಾಯ್, ಉದ್ಯಮ ಆರಂಭಿಸಿದ್ದು ಹಾಗೂ ಬೆಳೆದಿದ್ದು ಬೆಂಗಳೂರಿನಲ್ಲಿ. ಫ್ರಾನ್ಸ್ ಮತ್ತು ಸ್ವಿಟ್ಜರ್‌ಲೆಂಡ್‌ನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದ ಅವರು, ಸರ್ಜಾಪುರ ಹೊರವಲಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಿ ಅಲ್ಪಾವಧಿಯಲ್ಲೇ ಅಗ್ರಗಣ್ಯ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. 50ಕ್ಕೂ ಹೆಚ್ಚು ಐಷಾರಾಮಿ ಕಾರುಗಳ ಜೊತೆಗೆ ದುಬೈ ಸೇರಿದಂತೆ ವಿದೇಶಗಳಲ್ಲೂ ಅಪಾರ ಆಸ್ತಿ ಹೊಂದಿದ್ದರು.

ಸಿ.ಜೆ ರಾಯ್ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 1 ಬಿಲಿಯನ್ ಅಮೆರಿಕನ್ ಡಾಲರ್ ಎಂದು ವರದಿಯಾಗಿದೆ. 2025ರ ಫೋರ್ಬ್ಸ್ ಟಾಪ್ 100 ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲೂ ಅವರ ಹೆಸರು ಸೇರಿತ್ತು. ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿಗಳಲ್ಲಿ ಒಬ್ಬರಾಗಿದ್ದ ಸಿ.ಜೆ ರಾಯ್ ಅವರ ಅಕಾಲಿಕ ಮರಣ ಉದ್ಯಮ ವಲಯವನ್ನೇ ಶೋಕಸಾಗರಕ್ಕೆ ತಳ್ಳಿದೆ.

Advertisement

LEAVE A REPLY

Please enter your comment!
Please enter your name here